ಬಳ್ಳಾರಿ : ಜ್ಞಾನದ ಬೆಳಕು ಜಗತ್ತಿಗೆ ನೀಡಿದ ಮಹಾನ್ ವ್ಯಕ್ತಿ ಭಗವಾನ್ ಬುದ್ಧ ಅವರ ತತ್ವಾದರ್ಶ ನಾವೆಲ್ಲರೂ ಪಾಲಿಸೋಣ ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಜ್ಞಾನದಿಂದ ಜ್ಞಾನದ ಕಡೆ, ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಮಹಾನ್ ವ್ಯಕ್ತಿ ಭಗವಾನ್ ಬುದ್ಧ. ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಹ ಬೌಧ್ದ ಧರ್ಮ ಸ್ವೀಕರಿಸುವ ಮೂಲಕ ಬೌಧ್ದ ಧರ್ಮವನ್ನು ಬೆಂಬಲಿಸಿದರು ಎಂದು ತಿಳಿಸಿದರು.
ಎಸಿ ಪಿ.ಪ್ರಮೋದ್ ಮಾತನಾಡಿ, ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವ ಭೋದಿಸಿದ ಬುದ್ಧರ ತತ್ವ ಬೋಧನೆ ಅರಿತರೆ ಜೀವನದಲ್ಲಿ ಸುಖಶಾಂತಿ ನೆಮ್ಮದಿ ನೆಲೆಯೂರಲಿದೆ. ಬುದ್ಧನ ಜ್ಞಾನ ಮಾರ್ಗ ಅರಿತರೆ ಅದು ಮನುಷ್ಯರ ಮನಸ್ಸಿನ ಶುದ್ಧಿ ಮತ್ತು ಇದರಿಂದ ದುಃಖ ನಿವಾರಣೆ ಹೊಂದಲು ಸಾಧ್ಯವಾಗಲಿದೆ ಎಂದರು.