ಬಳ್ಳಾರಿ : ಅಕ್ರಮವಾಗಿ 884 ಕೋಟಿ ರೂ. ಮೌಲ್ಯದ 29 ಲಕ್ಷ ಟನ್ ಅದಿರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜಿ.ಜನಾರ್ದನರೆಡ್ಡಿ ನೇತೃತ್ವದ ಒಎಂಸಿ ಮತ್ತು ಅದರ ಸಹಚರ ಕಂಪನಿಗಳಿಂದ ವಸೂಲಿಗೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದ ಗಣಿ ಉದ್ಯಮಿ ಟಪಾಲ್ ಗಣೇಶ್ ಅವರಿಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗುವಂತೆ ಎಸ್ಪಿ ಎಚ್.ನಾಗಭೂಷಣ್ ನೋಟಿಸ್ ಜಾರಿಗೊಳಿಸಿದ್ದಾರೆ.
ವಿಚಾರಣೆ ಸಲುವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಸೆ.8 ರಂದು ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಹಾಗೂ ಲಭ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಪತ್ರದಲ್ಲಿ ಆದೇಶಿಸಲಾಗಿದೆ.
ಏನಿದು ವಿಚಾರ : ಆಂಧ್ರ ಪ್ರದೇಶದಲ್ಲಿ ಪಡೆದ ಗಣಿ ಗುತ್ತಿಗೆಯ ಪರವಾನಗಿಯನ್ನು ಬಳಸಿಕೊಂಡು ಜನಾರ್ದನರೆಡ್ಡಿ ಅವರ ನೇತೃತ್ವದ ಒಎಂಸಿ ಕಂಪನಿ ರಾಜ್ಯದಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಿ ಸಾಗಿಸಿದೆ ಎಂದು ಉದ್ಯಮಿ ಟಪಾಲ್ ಗಣೇಶ ಆರೋಪಿಸಿದ್ದರು. ಒಎಂಸಿ ಮತ್ತು ಸಹಚರ ಕಂಪನಿಗಳು ಸಂಡೂರಿನಿಂದ ಸುಮಾರು 29 ಲಕ್ಷ ಟನ್ ಕಬ್ಬಿಣದ ಅದಿರನು ಅಕ್ರಮವಾಗಿ ಗಣಿಗಾರಿಕೆ ಮಾಡಿವೆ ಎಂದು ವಿವಿಧ ವಿಚಾರಣೆ, ವರದಿಗಳು ಮತ್ತು ನ್ಯಾಯಾಲಯದ ತೀರ್ಪಿನಿಂದ ಸಾಬೀತಾಗಿದೆ. ಕೇಂದ್ರದ ಉನ್ನತಾಧಿಕಾರಿ ಸಮಿತಿ (ಸಿಇಸಿ) 2011ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿ, ಲೋಕಾಯುಕ್ತ ವರದಿ, ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣವೊಂದರಲ್ಲಿ ಹೈದರಬಾದ್‌ನ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿನ ಪ್ರತಿಯನ್ನು ಈಚೆಗೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ತಲುಪಿಸಿದ್ದರು.
==