ಲಾಕ್‌ಡೌನ್ ಇದ್ದರೂ ಟೈಮ್‌ಪಾಸ್ ಮಾಡಲು ತುಂಗಭದ್ರಾ ನದಿಗೆ ಹೋದ ಯುವಕರ ಸ್ಥಿತಿ ಏನಾಯಿತು ನೋಡಿ...

Tungabhadra
Published on

ಬಳ್ಳಾರಿ: ‘‘ಲಾಕ್‌ಡೌನ್ ಇದೆ, ಮನೇಲಿ ಕುಂತು ಕುಂತು ಬೇಜಾರಾಗ್ತಿದೆ... ಏನಪ್ಪಾ ಮಾಡೋದು...’’ ಇದು ಇತ್ತೀಚೆಗೆ ಎಲ್ಲೆಡೆ ಕೇಳಿಬರುತ್ತಿರುವ ಮಾತು. ಇದೇ ಭಾವನೆಯಲ್ಲಿ ಮನೆಯಿಂದ ಹೊರಹೋದ ಯುವಕರ ಸ್ಥಿತಿ ಏನಾಗಿದೆ ನೋಡಿ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಆರು ಯುವಕರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಟೈಂಪಾಸ್ ಮಾಡಲೆಂದು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದರು. ಆ ಪೈಕಿ ಮೂವರು ಯುವಕರು ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಪಕ್ರುದ್ದೀನ್ (25), ಮಾರುತಿ (23) ಮತ್ತು ಸುರೇಶ (25) ನೀರುಪಾಲಾದವರು. ಉಳಿದವರು ಅದ್ಹೇಗೋ ಪಾರಾಗಿ ಬಂದಿದ್ದಾರೆ.

ಇನ್ನೊಂದೆಡೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕು ಪರಾಪುರ ಗ್ರಾಮದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ವಿದ್ಯಾರ್ಥಿನಿ ಕಾಲುಜಾರಿ ನೀರು ಪಾಲಾಗಿದ್ದಾಳೆ. ಬೆಂಗಳೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಪಾರ್ವತಿ (17), ಲಾಕ್‌ಡೌನ್ ಘೋಷಣೆಯಾದ ಸ್ವಗ್ರಾಮಕ್ಕೆ ಬಂದಿದ್ದಳು. ಬೆಳಗ್ಗೆ ಗೆಳತಿಯೊಂದಿಗೆ ಬಟ್ಟೆ ತೊಳೆಯಲು ಹೋದಾಗ ಈ ಘಟನೆ ಸಂಭವಿಸಿದೆ. ವಿದ್ಯಾರ್ಥಿನಿ ತಂದೆ ಮೌನೇಶ ಮತ್ತು ತಾಯಿ ನಿಂಗಮ್ಮ ಬೆಂಗಳೂರಿನಲ್ಲಿಯೆ ಇದ್ದಾರೆ. ಕುಟುಂಬದವರ ಮನವಿಯ ಮೇರೆಗೆ ಡಿಸಿ ಸೂಚನೆಯಂತೆ ತಹಸೀಲ್ದಾರ ಬಲರಾಮ ಕಟ್ಟಿಮನಿ, ಮೃತ ವಿದ್ಯಾರ್ಥಿನಿಯ ಪಾಲಕರನ್ನು ಕರೆ ತರಲು ವಾಹನದ ಪರವಾನಗಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net