ಸ್ಥಳೀಯ ಸಂಸ್ಥೆಗಳು ಬಾಕಿ ತೆರಿಗೆ ಸಂಗ್ರಹಿಸಿ

Published on

ಬಳ್ಳಾರಿ ; ಜಿಲ್ಲೆಯಲ್ಲಿ ನಗರ, ಸ್ಥಳೀಯ ಸಂಸ್ಥೆಗಳು ವಿವಿಧ ಬಾಕಿ ತೆರಿಗೆ ಹಣ ಸಂಗ್ರಹಿಸಿ ಶೇಕಡವಾರು ಪ್ರಗತಿ ಸಾಧಿಸಬೇಕು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿನ ವಿವಿಧ ಆಸ್ತಿ, ನೀರಿನ ಶುಲ್ಕ ಮತ್ತು ಅಂಗಡಿ ಶುಲ್ಕ, ಟ್ರೇಡ್ ಲೈಸೆನ್ಸ್ ಗಳ ತೆರಿಗೆ ಹಣವನ್ನು ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ವಸೂಲಿ ಮಾಡಿ ಗುರಿ ಸಾಧಿಸಬೇಕು. ಹೆಚ್ಚು ಬಾಕಿ ಇರುವಲ್ಲಿ ಪೌರಾಯುಕ್ತರು, ಮುಖ್ಯ ಲೆಕ್ಕಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ವಸೂಲಿ ಮಾಡಬೇಕು ಎಂದರು.

ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ಕುರೇಕುಪ್ಪ ಪುರಸಭೆಯು 2024-25 ನೇ ಸಾಲಿನಲ್ಲಿ ಕೇವಲ ಶೇ.13.26 ರಷ್ಟು ಪ್ರಗತಿ ಸಾಧಿಸಿದ್ದು, ತೆರಿಗೆ ಹಣವನ್ನು ಆದ್ಯತೆ ಮೇಲೆ ವಸೂಲಿ ಮಾಡಬೇಕು . ಮಾಲೀಕರು ಮನೆಗಳ ನಿರ್ಮಾಣ ಸಂದರ್ಭದಲ್ಲಿ ಇರುವ ಕಟ್ಟಡಕ್ಕೆ ತೆರಿಗೆಯನ್ನು ಮೊದಲೇ ಎರಡು-ಮೂರು ವರ್ಷಗಳಿಗೆ ಕಟ್ಟಿರುತ್ತಾರೆ. ನಂತರ ಅವುಗಳನ್ನು ವಿಸ್ತರಣೆ ಮಾಡಿ, ಮೊದಲನೆ, ಎರಡನೇ ಮಹಡಿ ವಿಸ್ತೀರ್ಣ ಹೆಚ್ಚಿಸಿದರೂ ಸಹ ಹಳೆಯ ಕಟ್ಟಡದ ತೆರಿಗೆಯನ್ನೇ ಪಾವತಿ ಮಾಡುತ್ತಿರುತ್ತಾರೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಂಚನೆಯಾಗುತ್ತದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಿಶೀಲನೆ ಮಾಡಿ, ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ತೆರಿಗೆ ವಸೂಲಿ ಮಾಡಬೇಕು ಎಂದರು.

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಗ್ರಾಪಂ ವ್ಯಾಪ್ತಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡಬೇಕು. ನೀರು ಸರಬರಾಜು ಪೈಪ್ ಲೈನ್ ಗಳಲ್ಲಿ ಚರಂಡಿ ನೀರು ಸೇರಿದಂತೆ ಯಾವುದೇ ಕಲುಷಿತ ನೀರು ಸೇರದಂತೆ ಜಾಗ್ರತೆ ವಹಿಸಬೇಕು. ಈ ಕುರಿತು ಸಿಎಂ ಆಯಾ ಡಿಸಿ, ಜಿಪಂ ಸಿಇಒ ಅವರ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರಿಗೆ ತುಂಗಭದ್ರಾ ಜಲಾಶಯ ಅವಲಂಬಿತವಾಗಿದ್ದು, ಕಾಲುವೆಗಳ ಮುಖಾಂತರ ನೀರು ಶುದ್ದೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಕುರೇಕುಪ್ಪ ಭಾಗದಲ್ಲಿ ಬೋರ್ ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಕೆಎಂಇಆರ್ ಸಿ ಅನುದಾನದಡಿ ಕುಡಿಯುವ ನೀರಿನ ಐಆರ್ ಘಟಕ ಸ್ಥಾಪನೆಗೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ, 24*7 ಕುಡಿಯುವ ನೀರು ಸರಬರಾಜು, ಯುಜಿಡಿ ಸೇರಿದಂತೆ ವಿವಿಧ ಯೋಜನೆಗಳ ಪ್ರಸ್ತುತ ಸ್ಥಿತಿಗತಿ ವರದಿಗಳ ಕುರಿತು ಮಾಹಿತಿ ಪಡೆದ ಸಚಿವರು ಹಲವು ಸಲಹೆ-ಸೂಚನೆ ಅಧಿಕಾರಿಗಳಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net