ಬಳ್ಳಾರಿ : ತುಂಗಭದ್ರ ಜಲಾಯಶದ ಎಲ್‌ಎಲ್‌ಸಿ ಕಾಲುವೆಯ ನೀರನ್ನು ಏಪ್ರೀಲ್ 10 ರವರೆಗೆ ಹರಿಸಬೇಕು ಎಂದು ತುಂಗಭದ್ರ ರೈತ ಸಂಘದಿಂದ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಮಾತನಾಡಿ, ಜಿಲ್ಲೆಯಲ್ಲಿ ಎಲ್‌ಎಲ್‌ಸಿ ಅಡಿಯಲ್ಲಿ ಸುಮಾರು ಎರಡು ಲಕ್ಷ ಎಕರೆ ರೈತರು ಭತ್ತವನ್ನು ಬೆಳೆಯಲಾಗಿದೆ. ವಾತಾವರಣದ ವೈಪಲ್ಯದಿಂದಾಗಿ ಬೆಳೆಗಳ ಬೆಳವಣಿಗೆ ನಿಧಾನಗತಿಯಲ್ಲಿರುವುದರಿಂದ ಒಡೆ ಬರುವುದು ಮತ್ತು ತೆನೆ ಬಿಚ್ಚುವುದು ತಡವಾಗುತ್ತಿರುವುದರಿಂದ ಬೆಳೆಗಳು ಸಂಪೂರ್ಣವಾಗಿ ಬರಲು ಏಪ್ರೀಲ್ 10ರವರೆಗೆ ನೀರು ಬೇಕಾಗಿರುತ್ತದೆ. ಈ ಕಾಲುವೆಯಿಂದ ಆಂಧ್ರಪ್ರದೇಶ ಪಾಲಿನ ನೀರು ಏಪ್ರೀಲ್ 10 ರವರೆಗೂ ಪಡೆಯುತ್ತಿದ್ದಾರೆ. ಅವರೊಂದಿಗೆ ನಮ್ಮ ಪಾಲಿನ ನೀರನ್ನು ಬಿಟ್ಟರೆ ಮಾತ್ರ ಬೆಳೆಗಳು ಬರುತ್ತವೆ. ಇಲ್ಲವಾದರೆ ಎರಡು ಲಕ್ಷ ಎಕರೆಯಲ್ಲಿ ಬೆಳೆದಿರುವ ರೈತರ ಬೆಳೆಗಳು ನಷ್ಟ ಹೊಂದಲಿದ್ದಾರೆ ಎಂದರು.
ನಿತ್ಯವು ಜಲಾಶಯದಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಎಲ್ಲನ ಕಾಲುವೆಗಳಿಗೂ ಒಟ್ಟಾರೆಯಾಗಿ 7072 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಐಸಿಸಿ ತೀರ್ಮಾನದ ಪ್ರಕಾರ ಈ ತಿಂಗಳ ಕೊನೆಯವರೆಗೂ ನಿತ್ಯವು 7072 ಕ್ಯುಸೆಕ್ ನೀರು ಬಿಟ್ಟರೆ 10 ಟಿಎಂಸಿ ನೀರು ಮಾತ್ರ ಬಳಕೆಯಾಗಿ ಇನ್ನೂ ಜಲಾಶಯದಲ್ಲಿ ಎಲ್ಲರ ಪಾಲಿನ 11 ಟಿಎಂಸಿ ನೀರು ಉಳಿಯಲಿದೆ. ಬೆಳೆಗಳಿಗೂ ಸಹ ಏಪ್ರೀಲ್ 10ರವರೆಗೆ ನೀರು ಬೇಕಾಗಿರುವುದರಿಂದ ತಕ್ಷಣ ಜಿಲ್ಲೆಯ ಜನಪ್ರತಿನಿಧಿಗಳ, ನೀರಾವರಿ, ಕೃಷಿ ಮತ್ತು ತುಂಗಭದ್ರ ಮಂಡಳಿ ಅಧಿಕಾರಿಗಳ ಸಭೆ ಕರೆದು ಎಲ್‌ಎಲ್‌ಸಿ ಕಾಲುವೆಗೆ ಆಂಧ್ರ ಪ್ರದೇಶದ ದಿನನಿತ್ಯದ 850 ಕ್ಯುಸೆಕ್ ನೀರಿನೊಂದಿಗೆ ರಾಜ್ಯದ ಪಾಲಿನ 600 ಕ್ಯುಸೆಕ್ ನೀರು ಬಿಡಬೇಕು ಎಂದು ಕೋರಿದರು.