ಬಳ್ಳಾರಿ : ಅಂಗವಿಕಲರು ತಮ್ಮ ಜೀವನವನ್ನು ಸ್ಪೂರ್ತಿಯಾಗಿ ಸ್ವೀಕರಿಸಿ, ಇತರರಿಗೆ ಮಾದರಿಯಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಕೇಂದ್ರದ ವಿಶೇಷ ಅಡಿಪ್ ಯೋಜನೆಯಡಿ ಉಚಿತ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಧನ ಸಲಕರಣೆಗಳನ್ನು ಬಳಸಿಕೊಂಡು ಉತ್ತಮ ಜೀವನ ಸಾಗಿಸಬೇಕು. ನಗರದಲ್ಲಿ ಬುದ್ಧಿಮಾಂದ್ಯ ಮಕ್ಕಳ ಸರ್ಕಾರಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನವು ಜಿಲ್ಲಾಧಿಕಾರಿಯವರು ಬಿಡುಗಡೆ ಮಾಡಲಾಗಿದ್ದು, ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಆದ್ಯತೆಯಾಗುವಂತೆ ನೋಡಿಕೊಳ್ಳೋಣ ಎಂದರು.
ಗಾಂಧಿನಗರ ಪೊಲೀಸ್ ಠಾಣೆಯ ಪಿಎಸ್‌ಐ ರವಿಚಂದ್ರ ಮಾತನಾಡಿ, ಹೋರಾಟದ ಬದುಕಿನಲ್ಲಿ ಅಂಗವಿಕಲತೆ ಕಾರಣವಾಗಬಾರದು. ಬದಲಾಗಿ ತಮ್ಮಲ್ಲಿನ ಜ್ಞಾನದ ಸಾಮರ್ಥ್ಯ ಬಳಸಿಕೊಂಡು ಮುನ್ನಡೆಯಬೇಕು. ಸಾಧನೆಯ ಗುರಿ ಕಂಡುಕೊಳ್ಳಬೇಕು ಎಂದರಲ್ಲದೇ, ಬ್ಯಾಟರಿ ಚಾಲಿತ ವಾಹನ ವಿತರಣೆ ಮಾಡಲಾಗುತ್ತಿರುವುದರಿಂದ ತಾವು ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 429 ಫಲಾನುಭವಿಗಳಿಗೆ 931 ವಿವಿಧ ಬಗೆಯ ಸಾಧನ ಸಲಕರಣೆಗಳು ಮಂಜೂರಾಗಿದ್ದು, ತಾಲೂಕುವಾರು ಹಂತ-ಹಂತವಾಗಿ ವಿತರಿಸಲಾಗುತ್ತದೆ. ಇದೇ ವೇಳೆ ಸಾಂಕೇತಿಕವಾಗಿ ಐದು ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಣೆ ಮಾಡಲಾಯಿತು.