ಬಳ್ಳಾರಿ : ಕಾಂಗ್ರೆಸ್ ಪಕ್ಷ ಹಲವು ವರ್ಷಗಳಿಂದ ಇವಿಎಂ ಬಳಕೆಯಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂಬುದಾಗಿ ಆರೋಪಿಸುತ್ತಿದೆ. ಇದರ ನಡುವೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಮತಗಳ್ಳತನ ವಿರೋಧಿಸಿ ಬಿಹಾರದಲ್ಲಿ ಬೃಹತ್ ರ‌್ಯಾಲಿ ಹಮ್ಮಿಕೊಂಡ ಬೆನ್ನಲ್ಲೇ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಕುರಿತು ಅವಳಿ ಜಿಲ್ಲೆಯ ಜನರ ಅಭಿಪ್ರಾಯಗಳು ಇಲ್ಲಿವೆ.
* ಕೆಲ ವರ್ಷಗಳಿಂದ ಚುನಾವಣೆಯಲ್ಲಿ ಇವಿಎಂಯಿಂದ ಬಿಜೆಪಿ ಗೆಲ್ಲುತ್ತಿದೆ ಎಂಬುದಾಗಿ ಆರೋಪಿಸಲಾಗುತ್ತಿದೆ. ಆದ್ದರಿಂದ, ಮುಂದಿನ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುವುದರಿಂದ ಯಾವೆಲ್ಲಾ ಬದಲಾಣೆಯಾಗಲಿದೆ ಎಂಬುದು ಕಾದು ನೋಡೋಣ.
- ಆರ್.ಮಾಧವರೆಡ್ಡಿ, ರಾಜ್ಯಾಧ್ಯಕ್ಷ, ಹಸಿರು ಸೇನೆ ಹಾಗೂ ರಾಜ್ಯ ರೈತ ಸಂಘ. ಬಳ್ಳಾರಿ.
===
ಮತ್ತೆ ಹಿಂದಕ್ಕೆ ಹೋಗುತ್ತಿದೆ
* ವಿಶ್ವದಲ್ಲಿ ಪ್ರತಿಯೊಂದು ದೇಶಗಳು ಮುಂಚೂಣಿಯಲ್ಲಿ ಪ್ರಗತಿ ಹೊಂದುತ್ತಿವೆ. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಿ ಮತ್ತೆ ಹಿಂದಕ್ಕೆ ಹೋಗುತ್ತಿದ್ದೇವೆ. ಇವಿಎಂ ನಲ್ಲಿ ಅಕ್ರಮ ನಡೆದಿದೆ ಎಂಬುದಾಗಿ ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ರಾಜ್ಯದಲ್ಲಿ ಹಾಗೂ ದೇಶದ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಅಧಿಕಾರಕ್ಕೆ ಬರುತ್ತಿತ್ತು. ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಬಹುದಾಗಿತ್ತು ಅಲ್ವ ?.
- ಡಾ.ಅರುಣಾ ಕಾಮಿನೇನಿ, ವೈದ್ಯೆ. ಬಳ್ಳಾರಿ.
===
ಅಕ್ರಮದ ಮುದ್ರೆಗೆ ಒತ್ತು
* ಈ ಹಿಂದೆ ಚುನಾವಣೆಗಳು ಭಾರಿ ಅಕ್ರಮ ನಡೆಯುತ್ತಿದ್ದವು. ಇವಿಎಂನಿಂದ ಪಾರದರ್ಶಕತೆಯಿಂದ ಚುನಾವಣೆ ನಡೆಯುತ್ತಿದೆ. ಮತ್ತೆ ಬ್ಯಾಲೆಟ್ ಪೇಪರ್ ಒಬ್ಬರು ಎಷ್ಟು ಬಾರಿಯಾದರೂ ಮುದ್ರೆ ಒತ್ತ ಬಹುದು. ಮತದಾರ ಕೇಂದ್ರಕ್ಕೆ ಬಾರದಿದ್ದರೂ, ಮತಹಾಕಬಹುದು. ಈ ಹಿಂದೆ ಹಲವು ಉದಾಹರಣೆಗಳಿವೆ.
- ಮಹೇಶ್ ಕುಡತಿನಿ, ಸಂಚಾಲಕ, ವಿಜಯನಗರ ನಾಗರಿಕ ವೇದಿಕೆ, ಹೊಸಪೇಟೆ
ಉತ್ತಮ ಆಯ್ಕೆಗೆ ಇವಿಎಂ ಸಹಕಾರಿ
* ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ತರುವ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರದ ಅವೈಜ್ಞಾನಿಕ. ಇತಿಹಾಸ ನೋಡಿದರೆ, ಅಕ್ರಮ ನಡೆದಿದ್ದೆ ಹೆಚ್ಚು. ಆದ್ದರಿಂದ ಇವಿಎಂ ಮೂಲಕ ಚುನಾವಣೆ ನಡೆದರೆ ಉತ್ತಮ ವ್ಯಕ್ತಿಯ ಆಯ್ಕೆ ಸಾದ್ಯ. ಇಲ್ಲವೆಂದರೆ, ದೌರ್ಜನ್ಯ, ಸತ್ತವರು ಕೂಡ ಇಲ್ಲಿ ಮತ ಹಾಕಬಹುದು.
- ರಾಮಜೀ ನಾಯ್ಕ, ಜಿಲ್ಲಾಧ್ಯಕ್ಷ, ಬಂಜಾರ ಸೇವಾಲಾಲ್ ಸೇನೆ, ವಿಜಯನಗರ
===
ಅಕ್ರಮ ಮತಗಳಿಗೆ ಸರಳ ದಾರಿ
* ಬ್ಯಾಲೆಟ್ ಪೇಪರ್ ಚುನಾವಣೆ ನಡೆಸಿದರೆ, ಅಕ್ರಮ ಮತಗಳಿಗೆ ಸರಳವಾದ ದಾರಿ ಮಾಡಿದಂತೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ತಪ್ಪಾದ ವ್ಯಕ್ತಿಯ ಆಯ್ಕೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರ ಬದಲಿಸಬೇಕಿದೆ. ಇಲ್ಲವೆಂದರೆ ಸಮಾಜದಲ್ಲಿ ನೆಮ್ಮದಿ ಕಳೆದುಕೊಳ್ಳು ಸಾಧ್ಯತೆಯಿದೆ.
- ಹುಲಿಗೆಮ್ಮ, ಜಿಲ್ಲಾ ಅಧ್ಯಕ್ಷೆ, ಜನನಿ ಮಹಿಳಾ ಸಂಘ, ಹೊಸಪೇಟೆ
====
ಅಪನಂಬಿಕೆ ಹೋಗಲಾಡಲಿದೆ
* ಬೇರೆ ಬೇರೆ ದೇಶಗಳಲ್ಲಿ ಚುನಾವಣೆಗಳಲ್ಲಿ ಇವಿಎಂ ಬಳಸಿ ಮತ್ತೆ ಕೆಲ ವರ್ಷಗಳ ನಂತರ ಬ್ಯಾಲೆಟ್ ಪೇಪರ್ ಬಳಸುತ್ತಿದ್ದಾರೆ. ಆದ್ದರಿಂದ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಿದ ಬಳಿಕ ಇವಿಎಂ ನಷ್ಟೇ ಫಲಿತಾಂಶ ಬಂದರೆ ಇವಿಎಂ ಮೇಲಿನ ಅಪನಂಬಿಕೆ ಹೋಗಲಾಡಲಿದೆ.
- ಶ್ರೀಶೈಲ ಆಲದಹಳ್ಳಿ, ಜನಸಂಗ್ರಾಮ ಪರಿಷತ್, ಸಂಡೂರು.
===
ಇವಿಎಂ ಮತದಾನದ ಸಂಶಯವಿದೆ
ಇವಿಎಂಗಳಲ್ಲಿ ಮತದಾನ ಮಾಡುವುದು ತೃಪಿ ತಂದಿಲ್ಲ. ಬ್ಯಾಲೆಟ್ ಪೇಪರ್‌ಗಳಲ್ಲಿ ನಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದು ನಿಖರವಾಗಿ ತಿಳಿಯುತ್ತದೆ. ಆದರೆ ಇವಿಎಂ ಗಳಲ್ಲಿ ಗೊಂದಲವಾಗುತ್ತದೆ. ಈ ಕುರಿತು ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಸ್ವಾಗತಾರ್ಹವಾಗಿದೆ.
- ಜಲ್ಸನ್ ಗುರು ಹೂವಿನಹಡಗಲಿ ನಿವಾಸಿ.
====
ಇವಿಎಂ ಪದ್ಧತಿ ಇರಲಿ
* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನೇ ಸುಗ್ರೀವಾಜ್ಞೆ ಹೊರಡಿಸಿದರೂ ಅದು ಸ್ವತಂತ್ರ ಆಯೋಗವಾಗಿರುತ್ತದೆ. ಅವುಗಳಿಗೆ ಪ್ರಶ್ನೆ ಮಾಡುವುದಕ್ಕೆ ಬರುವುದಿಲ್ಲ. ಆಯೋಗದ ನಿರ್ಧಾರಕ್ಕೆ ನಾವು ಬದ್ಧರಾಗಬೇಕು. ಬ್ಯಾಲೆಟ್ ಪೇಪರ್‌ಗಳಿಂದ ಅಕ್ರಮವಾಗಿದ್ದ ಉದಾಹರಣೆಗಳಿವೆ. ಇವಿಎಂ ನಿಂದ ಬೇಗ ಫಲಿತಾಂಶ ಪಡೆಯಬಹುದು. ಇವಿಎಂ ಪದ್ಧತಿ ಇರಲಿ.
- ಮಹಾಬಲೇಶ್ ಶಿಕ್ಷಕ, ಸಿರಿಗೇರಿ.
=====
ಸರ್ಕಾರದ ನಿರ್ಧಾರ ಅಕ್ಷಮ್ಯ
* ಈ ಹಿಂದೆ ಚುನಾವಣಾ ಅಕ್ರಮ ತಡೆಯಲು ಚುನಾವಣಾ ಆಯೋಗ ಮತಪತ್ರ ಬದಲು ಇವಿಎಂ ತಂದು ದೇಶದಲ್ಲಿಯೇ ಮಹತ್ತರ ಬದಲಾವಣೆ ತಂದು ಪಾರದರ್ಶಕ ಚುನಾವಣೆಗಳನ್ನು ಮಾಡಿತ್ತು. ಆದರೆ, ಸರ್ಕಾರ ಈ ನಿರ್ಧಾರವನ್ನು ಬದಲಿಸಿ ಮತ್ತೆ ಅಕ್ರಮ ಚುನಾವಣೆ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ. ಇದು ಅಮಾಯಕ ಮತದಾರರನ್ನು ಹಾದಿ ತಪ್ಪಿಸುವ ಕೆಲಸ. ಸರ್ಕಾರದ ಈ ನಿರ್ಧಾರ ಅಕ್ಷಮ್ಯ.
- ವಿವೇಕಾನಂದ, ಅತಿಥಿ ಉಪನ್ಯಾಸಕ, ಕೂಡ್ಲಿಗಿ.
====
ಇವಿಎಂ ಬಳಕೆಗೆ ಯೋಗ್ಯವಿದೆ
* ಇವಿಎಂ ಮತಯಂತ್ರ ವೈಜ್ಞಾನಿಕಯುಗದ ಆವಿಷ್ಕಾರವಾಗಿದ್ದು ಚುನಾವಣೆಯಲ್ಲಿ ಬಳಕೆಗೆ ಯೋಗ್ಯವಾಗಿದೆ. ಇನ್ನಷ್ಟು ಸುಧಾರಿತ ತಂತ್ರಜ್ಞಾನ ಬಳಸಿ ಇವಿಎಂ ಯಂತ್ರ ರೂಪಿಸುವ ಮೂಲಕ ಕಾಗದ, ಸಮಯ ಮತ್ತು ಮಾನವರ ಬಳಕೆ ಉಳಿತಾಯ ಸಾಧ್ಯವಾಗುತ್ತದೆ. ವಿಶ್ವಾಸಾರ್ಹಯುಳ್ಳ ಇವಿಎಂ ಯಂತ್ರ ಬಳಸುವಲ್ಲಿ ಚುನಾವಣಾ ಆಯೋಗ ಮುಂದಾಗಲಿ. ಇವಿಎಂ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಲಿ.
- ಅಶೋಕ ಕುಕನೂರ, ವ್ಯಾಪಾರಿ, ಕಂಪ್ಲಿ.
=====
ಬ್ಯಾಲೆಟ್ ಪೇಪರ್ ಸ್ವಾಗತಾರ್ಹ
ಸ್ಥಳೀಯ ಸಂಘ ಸಂಸ್ಥೆ ಚುನಾವಣೆ ಗಳಲ್ಲಿ ಇವಿಎಂ ಬಳಕೆಯಿಂದ ತಾಂತ್ರಿಕ ಸಮಸ್ಯೆಯ ನೆಪ ಹೇಳಿ ಆಡಳಿತಾರೂಢ ಪಕ್ಷದ ಬೆಂಬಲಿತರು ಸುಲಭವಾಗಿ ಹೆಚ್ಚು ಆಯ್ಕೆಯಾಗಬಹುದು ಎಂಬ ಆರೋಪಗಳ ಕೂಗ ಹಲವಾರು ದಶಕಗಳಿಂದ ಇದೆ. ಬ್ಯಾಲೆಟ್ ಪೇಪರ್ ಬಳಕೆಯಿಂದ ಚುನಾವಣಾ ಫಲಿತಾಂಶದ ಗುಣಮಟ್ಟ ಸುಧಾರಣೆ ಯಾಗಬಹುದು ಸರ್ಕಾರವು ಇದನ್ನು ಅರಿತು ಸುಗ್ರಿವಾಜ್ಞೆ ಹೊರಡಿಸಿರುವುದು ಸ್ವಾಗತಾರ್ಹ.
* ಎಚ್.ಹನುಮಂತಪ್ಪ, ಉಪಾಧ್ಯಕ್ಷ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ, ಹರಪನಹಳ್ಳಿ.
===
ಸರ್ಕಾರದ ಕ್ರಮ ಅನುಕೂಲ
* ಗ್ರಾಮೀಣ ಭಾಗದ ಜನರಲ್ಲಿ ಇವಿಎಂ ಮತದಾನ ಪ್ರಕಿಯೆ ಸಮಾರ್ಪಕವಾಗಿ ಅರ್ಥವಾಗುವುದಿಲ್ಲ. ಹೀಗಾಗಿ ಬ್ಯಾಲೆಟ್ ಪೇಪರ್ ಮತದಾನದ ಅನುಭವ ಹೊಂದಿರುವುದರಿಂದ ಯಾವ ಪಕ್ಷಕ್ಕೆ ಮತ್ತು ಯಾವ ಆಭ್ಯರ್ಥಿಗೆ ಮತದಾನ ಮಾಡಿದ್ದೇವೆ ಎಂಬುದು ತಿಳಿಯಲಿದೆ. ಸರ್ಕಾರದ ಕ್ರಮವು ಅನಕ್ಷರಸ್ಥ ಅನುಕೂಲವಾಗಲಿದೆ.
- ಬಿ.ಟಿ.ಗುದ್ದಿ ದುರುಗೇಶ, ದಸಂಸ ಸಂಚಾಲಕ, ಕಾನಹೊಸಳ್ಳಿ.
====
ಮತಪತ್ರವೇ ಸರಿ, ಸೂಕ್ತ ನಿರ್ಧಾರ
* ಅವಿದ್ಯಾವಂತ ಪುರುಷ, ಮಹಿಳೆಯರಿಗೆ ಮತಯಂತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಯ ಹೆಸರು ಮತ್ತು ಚಿಹ್ನೆ ಗುರುತಿಸುವುದು ಕಷ್ಟವಾಗಿತ್ತು. ಪರಪಾಟಾಗಿ ಯಾವುದ್ಯಾವುದೊ ಗುರುತಿಗೆ ಮತ ಹಾಕುತ್ತಿದ್ದರು. ಮತಪತ್ರವಾದರೆ ಈ ಸಮಸ್ಯೆ ಇಲ್ಲ. ಸರಿಯಾಗಿ ಮತಚಲಾಯಿಸುತ್ತಾರೆ. ಸರ್ಕಾರ ಒಳ್ಳೆ ನಿರ್ಧಾರ ಮಾಡಿದೆ.
- ಹೊಸಕೋಡಿಹಳ್ಳಿ ಭರಮಪ್ಪ, ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೊಟ್ಟೂರು
====
ಮತದಾನ ಸೂಕ್ತವಾಗಿ ನಡೆಯಲಿ
* ಇವಿಎಂ ಅಥವಾ ಬ್ಯಾಲೆಟ್ ಪೇಪರ್ ಮತದಾನ ಯಾವುದೇ ಆಗಿದ್ದರೂ ಚುನಾವಣೆಯಲ್ಲಿ ಅಕ್ರಮ ನಡೆಯದಿದ್ದರೆ, ಎರಡೂ ಒಳ್ಳೆಯದೇ. ಈ ಹಿಂದೆ ಬ್ಯಾಲೆಟ್ ಪೇಪರ್ ಇರುವಾಗಲೂ ಸಾಕಷ್ಟು ಅಕ್ರಮ ನಡೆದಿವೆ ಎನ್ನುವ ಆರೋಪಗಳಿದ್ದವು. ಪರ್ಯಾಯ ಏನೇ ಇರಲಿ, ಚುನಾವಣೆ ಕಾನೂನಿನ ಚೌಕಟ್ಟಿನಲ್ಲಿ ನಡೆದರೆ ಮತದಾರ ಪ್ರಜೆಗೆ ನ್ಯಾಯಸಮ್ಮತ.
-ಈ.ಕೆ.ಮೂರ್ತಿ, ಸಂಚಾಲಕರು, ಹಗರಿಬೊಮ್ಮನಹಳ್ಳಿ
===
ಚುನಾವಣೆ ವೆಚ್ಚ ಅಧಿಕವಾಗಲಿದೆ
* ಇವಿಎಂ ಯಂತ್ರದ ಮೂಲಕ ನಡೆಯುವ ಚುನಾವಣಾ ಪ್ರಕ್ರಿಯೆಗೆ ನಮ್ಮ ವಿರೋಧ ಇಲ್ಲ. ಆದರೆ ಬಿಹಾರ ಸೇರಿ ಇತರೆಡೆ ಯಂತ್ರ ದುರ್ಬಳಕೆ ಆರೋಪ ಕೇಳಿ ಬರುತ್ತಿವೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಒಂದು ಕಮಿಟಿ ರಚಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಜನರಿಗೆ ತಿಳಿಸಿಬೇಕು. ಬ್ಯಾಲೆಟ್ ಪೇಪರ್ ಮೂಲಕವಾದರೆ ಚುನಾವಣಾ ವೆಚ್ಚ ಅಧಿಕವಾಗಲಿದೆ
- ಶಿವಶಂಕರ್, ಜಿಲ್ಲಾಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘ, ಕುರುಗೋಡು.
====