ಕೌಶಲ್ಯಾಭಿವೃದ್ಧಿಗೆ ಸಹಭಾಗಿತ್ವ ಇರಲಿ

Published on

ಬಳ್ಳಾರಿ ; ಜಿಲ್ಲೆಯ ಕೈಗಾರಿಕೆ ವಲಯಗಳಲ್ಲಿ ಉದ್ಯೋಗ ಸೃಷ್ಟಿಸುವುದರ ಜತೆಗೆ ಯುವ ಸಮುದಾಯದಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಬೇಕು. ಇದಕ್ಕೆ ಕೈಗಾರಿಕೆಗಳೂ ಸಹ ಕೈಜೋಡಿಸಬೇಕು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಪ್ರಾಧಿಕಾರದ ಅಧ್ಯಕ್ಷ ಡಾ.ಇ.ವಿ ರಮಣ ರೆಡ್ಡಿ ಹೇಳಿದರು.

ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಸಂಡೂರಿನಲ್ಲಿ ಸ್ಕಿಲ್ ಪಾರ್ಕ್/ಅಕಾಡೆಮಿ ಸ್ಥಾಪಿಸುವ ಸಂಬಂಧ ಮೈನಿಂಗ್ ಮತ್ತು ಸ್ಟೀಲ್ ಇಂಡಸ್ಟ್ರಿಸ್ ಹಾಗೂ ಪಾಲುದಾರರ ಜತೆ ಸೋಮವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಕೈಗಾರಿಕೆ-ಪಾಲುದಾರರೊಂದಿಗೆ ಸಮಾಲೋಚನಾ ಸಭೆ ಆಯೋಜಿಸಲಾಗಿದ್ದು, ಕೈಗಾರಿಕೆಗಳು ಮತ್ತು ಪಾಲುದಾರರ ನಡುವಿನ ಅಂತರವನ್ನು ಕಡಿಮೆ ಮಾಡಲು ಹಾಗೂ ಉದ್ಯೋಗ ಕ್ಷೇತ್ರದಲ್ಲಿನ ಬೇಡಿಕೆಗಳನ್ನು ಪೂರೈಸಲು ಸಹಯೋಗ, ಸಹಭಾಗಿತ್ವ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಬೇಕಿದೆ ಎಂದು ತಿಳಿಸಿದರು.

ಪ್ರಸ್ತುತದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿಗಳಿಗೆ ಸೀಮಿತವಾಗಿದ್ದಾರೆ. ಬದಲಾಗಿ ಅವರಿಗೆ ಕೌಶಲ್ಯತೆ ಆಧಾರಿತ ಶಿಕ್ಷಣ ಮೌಲ್ಯವು ನೀಡಬೇಕಿದೆ. ಹಾಗಾಗಿ ಇದಕ್ಕೆ ಕೈಗಾರಿಕೆಗಳ ಸಹಭಾಗಿತ್ವವೂ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕಾ ವಲಯಗಳು ಹೆಚ್ಚಾಗಿದ್ದು, ಉದ್ಯೋಗದಾತರು ಕೌಶಲ್ಯ ಶಿಕ್ಷಣ ಅಳವಡಿಸಬೇಕು. ಜತೆಗೆ ಸುರಕ್ಷತೆ ಮತ್ತು ದಕ್ಷತೆಗೆ ಆದ್ಯತೆ ನೀಡಬೇಕು. ಇದಕ್ಕೆ ಬೇಕಾದ ಎಲ್ಲಾ ಅಗತ್ಯ ಸಹಕಾರ ಜಿಲ್ಲಾಡಳಿತ ನೀಡಲಿದೆ ಎಂದು ಹೇಳಿದರು.

ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕಾರ್ಖಾನೆಗಳ ವ್ಯವಸ್ಥಾಪಕರು ಮತ್ತು ಪಾಲುದಾರರು, ಈ ಭಾಗದ ಯುವಜನತೆಯು ಕೌಶಲ್ಯಾಧಾರಿತ ಶಿಕ್ಷಣ ಹೆಚ್ಚು ಅಳವಡಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net