ಬಳ್ಳಾರಿ ; ಮಕ್ಕಳಲ್ಲಿನ ಅನೇಕ ರೀತಿಯ ಪ್ರತಿಭೆಗಳನ್ನು ಗುರುತಿಸಲು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಸರ್ಕಾರಿ ಕನ್ನಡ ಮಾಧ್ಯಮ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಲೀಮ ರೋಸ್ ಹೇಳಿದರು.
ಇಲ್ಲಿನ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಬಾಲಭವನ ಸೊಸೈಟಿ ಸಹಯೋಗದೊಂದಿಗೆ 05 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಗುರುವಾರ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಎಲ್ಲ ಮಕ್ಕಳು ಹೆಚ್ಚಾಗಿ ಭಾಗವಹಿಸಲು ಆಸಕ್ತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕಿ ಎಚ್.ಎಂ. ಶ್ವೇತಾ ಮಾತನಾಡಿ, ಮಕ್ಕಳಿಗೆ ವಿವಿಧ ಕಲೆಗಳಲ್ಲಿ ಪ್ರತಿಭೆಯಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಹೊರ ತರುವಲ್ಲಿ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಮಾತ್ರ ತಮ್ಮಲ್ಲಿರುವ ಹೊಸ ಪ್ರತಿಭೆ ಹೊರ ಹೊಮ್ಮಲು ಸಾಧ್ಯ ಎಂದು ಹೇಳಿದರು.
ಚಿತ್ರಕಲೆ ಸ್ಪರ್ಧೆಯಲ್ಲಿ 65 ಮಕ್ಕಳು ಭಾಗವಹಿಸಿದ್ದರು. ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.