ಬಳ್ಳಾರಿ : ಹೊಸ ಅವಕಾಶಗಳ ಯುಗದಲ್ಲಿ ನಿಮ್ಮ ಭವಿಷ್ಯವನ್ನು ನೀವೇ ಕಟ್ಟಿಕೊಳ್ಳಬೇಕು. ಯಶಸ್ಸಿಗೆ ಏಕೈಕ ಅಡ್ಡಿ ಮಿತಿಗಳು. ಆದ್ದರಿಂದ, ವಿದ್ಯಾರ್ಥಿಗಳ ಕನಸು ದೊಡ್ಡದಾಗಿರಲಿ, ಹೆಜ್ಜೆ ದೃಢವಾಗಿರಲಿ ಎಂದು ನವದೆಹಲಿಯ ಇಂಟರ್ ಯುನಿವರ್ಸಿಟಿ ಆಕ್ಸಲರೇಟರ್ ನಿರ್ದೇಶಕ ಪ್ರೊ.ಅವಿನಾಶ್ ಚಂದ್ರ ಪಾಂಡೆ ಹೇಳಿದರು.
ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಕೈಯಲ್ಲಿ ಆತ್ಮನಿರ್ಭರ ಭಾರತದ ಭವಿಷ್ಯವಿದೆ. ಬಾಹ್ಯಾಕಾಶ ತಂತ್ರಜ್ಞಾನದಿಂದ ಕೃತಕ ಬುದ್ಧಿ ಮತ್ತೆವರೆಗೆ, ಹಸಿರು ಕ್ಷೇತ್ರದಿಂದ ಜಲವಾಯು ಬದಲಾವಣೆ ನಿರ್ವಹಣೆಯವರೆಗೆ ಮುಂಚೂಣಿಯಲ್ಲಿ ನಿಲ್ಲುವ ಅವಕಾಶಗಳನ್ನು ಹೊಂದಿದ್ದೀರಿ ಎಂದು ತಿಳಿಸಿದರು.
ಪದವಿಯೊಂದೇ ಅಂತಿಮ ಗುರಿಯಲ್ಲ, ಅದು ಜೀವನಪರ್ಯಂತದ ಕಲಿಕೆಯ ಪಯಣದ ಒಂದು ಹಂತ ಮಾತ್ರ. ವಿನಯವಂತಿಕೆ, ಹೊಂದಿಕೊಳ್ಳುವಿಕೆ ಮತ್ತು ನಿರಂತರ ಜ್ಞಾನಾರ್ಜನೆ ವಿಶಿಷ್ಟರನ್ನಾಗಿ ಮಾಡುತ್ತದೆ ಎಂದು ಕಿವಿಮಾತು ಹೇಳಿದರು.
ನಿಜವಾದ ಯಶಸ್ಸು ಸಂಪತ್ತು ಅಥವಾ ಹುದ್ದೆಗಳಲ್ಲಿಯಾಗಲಿ ಅಳೆಯಲು ಬರುವುದಿಲ್ಲ. ಅದು ಸಮಾಜದ ಮೇಲೆ ಬೀರಿದ ಸಕಾರಾತ್ಮಕ ಪ್ರಭಾವದಲ್ಲಿ ಅಳೆಯಲ್ಪಡುತ್ತದೆ. ಪಾಲಕರ ತ್ಯಾಗ ಮತ್ತು ಅಚಲ ಬೆಂಬಲವು ಮಕ್ಕಳ ಯಶಸ್ಸಿನ ಆಧಾರವಾಗಿದೆ. ಶಿಕ್ಷಕರ ಬೋಧನೆ, ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಯುವಕರು ಕನಸು ಸಾಕಾರಗೊಳ್ಳಲಿದೆ ಎಂದು ಸಲಹೆ ನೀಡಿದರು.
ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಮಾತನಾಡಿದರು. ಆತ್ಮನಿರ್ಭರ ಭಾರತ ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವಾಗಲು ಯುವಕರು ತಮ್ಮ ಪ್ರತಿಭೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ನೀಡಬೇಕು. ಯುವಪೀಳಿಗೆ ಉದ್ಯೋಗಾಕಾಂಕ್ಷಿಯಾಗಿ ಬದಲಾಗಿ ಉದ್ಯೋಗ ಒದಗಿಸುವವರ ಪಾತ್ರ ನಿರ್ವಹಿಸಬೇಕು ಎಂದರು.
ದೇಶವು 100 ಕ್ಕೂ ಹೆಚ್ಚು ಯುನಿಕಾರ್ನ್ ಸ್ಟಾರ್ಟ್ ಆ್ಯಪ್‌ಗಳನ್ನು ಹೊಂದಿದೆ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯು ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯವಸ್ಥೆಯಾಗಿದೆ. ಚಂದ್ರಯಾನದಿಂದ ಎಐ ವರೆಗಿನ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ. ಈ ಪ್ರಯಾಣದಲ್ಲಿ ಪ್ರಮುಖ ಶಕ್ತಿ ನಿಮ್ಮಂತಹ ಯುವಕರು ಎಂದು ಹೇಳಿದರು.
ವಿವಿ ಆವರಣವನ್ನು ಸ್ವಚ್ಛವಾಗಿಡಲು ಸ್ವಚ್ಛತಾ ಅಭಿಯಾನವನ್ನು ನಡೆಸಬೇಕು. ವಿಶ್ವವಿದ್ಯಾಲಯಗಳನ್ನು ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡುವ ಹಾಗೂ ಅಂತರ-ಶಿಸ್ತಿನ ಮತ್ತು ಅಂತರ-ವಿಶ್ವವಿದ್ಯಾಲಯ ಸಹಯೋಗವನ್ನು ಉತ್ತೇಜಿಸುವ ಕಡೆಗೆ ಕೆಲಸ ಮಾಡುವ ಅವಶ್ಯಕತೆಯಿದೆ ಎಂದರು.
ಬಳ್ಳಾರಿಯು ಪ್ರಾಚೀನದಿಂದಲೂ ಭವ್ಯ ಇತಿಹಾಸ ಹೊಂದಿದೆ. ಈ ವಿವಿ ಕಲೆ, ಸಾಹಿತ್ಯ ಮತ್ತು ಶಿಕ್ಷಣದ ಭೂಮಿಯಾಗಿ ಮತ್ತು ಮಹಾನ್‌ಚಕ್ರವರ್ತಿ ಶ್ರೀಕೃಷ್ಣದೇವರಾಯ ಪ್ರಜೆಗಳ ಕಡೆಗೆ ತೋರಿಸಿದ ಔದಾರ್ಯ ಮತ್ತು ದಯೆಗಾಗಿ ಪ್ರಸಿದ್ಧವಾಗಿದ್ದ ಐತಿಹಾಸಿಕ ಭೂಮಿಯಲ್ಲಿ ನೆಲೆಗೊಂಡಿದೆ ಎಂದರು.
ಮೂವರಿಗೆ ಗೌರವ ಡಾಕ್ಟರೇಟ್ : ವಿಎಸ್‌ಕೆ ವಿವಿಯ 13ನೇ ಘಟಿಕೋತ್ಸವದ ಸಮಾರಂಭದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಸಾಹಿತಿ ಡಾ.ವಸುಂಧರಾ ಭೂಪತಿ, ಬಿ.ಕೆ.ಜಿ.ಫೌಂಡೇಷನ್‌ನ ಬಾವಿಹಳ್ಳಿ ನಾಗನಗೌಡ ಮತ್ತು ಪ್ರೆಸ್ಟೀಜ್ ಗ್ರೂಪನ್ ಗೌರವಾಧ್ಯಕ್ಷ ಇರ್ಫಾನ್ ರಜಾಕ್ ಅವರಿಗೆ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು. ಇವರೊಂದಿಗೆ ವಿವಿಯ ಸ್ನಾತಕ, ಸ್ನಾತಕೋತ್ತರ ವಿವಿಧ ವಿಭಾಗಗಳಲ್ಲಿ 42 ವಿದ್ಯಾರ್ಥಿಗಳು 51 ಚಿನ್ನದ ಪದಕಗಳು ಹಾಗೂ 57 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಎಲ್ಲ ವಿಭಾಗಗಳ ಸ್ನಾತಕ ಪದವಿಯ 80 ಮತ್ತು ಸ್ನಾತಕೋತ್ತರ ಪದವಿಯಿಂದ 75 ವಿದ್ಯಾರ್ಥಿಗಳು ಸೇರಿ ಒಟ್ಟು 155 ವಿದ್ಯಾರ್ಥಿಗಳು ರ‌್ಯಾಂಕ್ ಪ್ರಮಾಣ ಪತ್ರವನ್ನು ಅತಿಥಿಗಳು ನೀಡಿ ಗೌರವಿಸಿದರು.
ತರಕಾರಿ ವ್ಯಾಪಾರಿ ಪುತ್ರಿ ನಾಲ್ಕು ಚಿನ್ನದ ಪದಕ : ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿವಾಸಿ ಮಾಜಿ ದೇವದಾಸಿ, ತರಕಾರಿ ವ್ಯಾಪಾರಿ ಎನ್.ನಾಗಮ್ಮ ಅವರ ಪುತ್ರಿ ಹಂಸ ಎನ್. ವಾಣಿಜ್ಯಶಾಸ್ತ್ರದ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಗಮನಸೆಳೆದರು. ಅನಾದಿ ಕಾಲದಿಂದಲೂ ಸಾಮಾಜಿಕ ಪಿಡುಗು ಎನಿಸಿದ ದೇವದಾಸಿ ಪದ್ದತಿ ಕಾಲಕ್ರಮೇಣ ಕಡಿಮೆಯಾಗುತ್ತ ಬಂದಿದೆ. ಕೆಲ ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿರುವ ಎನ್.ನಾಗಮ್ಮ ಆರ್ಥಿಕ ಸಂಕಷ್ಟಗಳ ನಡುವೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಹಿರಿಯ ಪುತ್ರ ತಾಯಿ ಜತೆಗೆ ತರಕಾರಿ ವ್ಯಾಪಾರಕ್ಕೆ ಸಹಾಯನಾಗಿದ್ದು ಉಳಿದ ಒಬ್ಬ ಪುತ್ರ ಪೊಲೀಸ್ ಪೇದೆಯಾಗಿದ್ದಾರೆ. ಇನ್ನೂಬ್ಬ ಪುತ್ರ ಮತ್ತು ಪುತ್ರಿಯನ್ನು ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಡತನದಂತಹ ಕುಟುಂಬದಿಂದ ಬಂದ ಎನ್.ಹಂಸ, ತಾಯಿ ನಾಗಮ್ಮ ಅವರ ಸಮಾಜದ ಅಪಮಾನ ಮೆಟ್ಟಿನಿಂತು ಮಾದರಿಯಾಗುವ ಸಾಧನೆಗೈದಿದ್ದಾಳೆ. ಹಂಸ ಅವರು ಪಿಎಚ್‌ಡಿ ಪೂರ್ಣಗೊಳಿಸಿ ಪ್ರಾಧ್ಯಾಪಕಿಯಾಗುವ ಕನಸು ಹೊಂದಿದ್ದಾರೆ.
ಅಕ್ಕಸಾಲಿಗನ ಪುತ್ರಿಗೆ ಮೂರು ಚಿನ್ನದ ಪದಕ : ಇಲ್ಲಿನ ದೇವಿನಗರದ ನಿವಾಸಿ ವೃತ್ತಿಯಲ್ಲಿ ಅಕ್ಕಸಾಲಿಗ ಗಿರೀಶ್ ಹಾಗೂ ಹನುಮಂತಮ್ಮ ದಂಪತಿಯ ಪುತ್ರಿ ರಾಜೇಶ್ವರಿ ಔದ್ಯೋಗಿಕ ರಸಾಯನಶಾಸ್ತ್ರದ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಈಗಾಗಲೇ ಪಿಎಚ್‌ಡಿ ಗೆ ಅರ್ಜಿ ಸಲ್ಲಿಸಿರುವ ರಾಜೇಶ್ವರಿ ಕುಟುಂಬದ ಆಶಯದಂತೆ ಪ್ರೊಪೆಸರ್ ಹುದ್ದೆ ಪಡೆಯಬೇಕು ಎಂಬ ಕನಸು ಹೊಂದಿದ್ದಾರೆ ಎಂದರು. ಅದರಂತೆ ಮನೋಜ್, ಸುಹಾನಾ ತಸ್ಲೀಮ್, ಶಿಲ್ಪಾ, ವಿಷ್ಣು ಪ್ರಿಯಾ, ಮಹಮ್ಮದ್ ನಕೀಬಲಿ ಸೇರಿ ಐವರು ತಲಾ ಎರಡು ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಬಾಕ್ಸ್ : ವೇದಿಕೆ ಹತ್ತಿ ಮಕ್ಕಳು ರಾಜ್ಯಪಾಲರಿಂದ ಪದಕ ಪಡೆಯುತ್ತಿದ್ದರೆ ಇತ್ತ ಸಭಾಂಗಣದಲ್ಲಿ ಕುಳಿತಿದ್ದ ಪಾಲಕರಲ್ಲಿ ಅತೀವ ಖುಷಿ. ಭಾವುಕತೆ ತುಂಬಿದ್ದ ಕಂಗಳಿಂದ ಮಕ್ಕಳ ಸಾಧನೆ ನೋಡುತ್ತಲ್ಲೇ ಚಪ್ಪಾಳೆ ತಟ್ಟುತ್ತಿದ್ದರು. ವಿವಿಧ ಕೋರ್ಸ್‌ಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದ ಅಭ್ಯರ್ಥಿಗಳಲ್ಲಿ ಸಾಧನೆಯ ಸಂಭ್ರಮ, ಸಂತೃಪ್ತಿಯ ಕ್ಷಣ, ಪಾಲಕರಲ್ಲಿ ಸಮಾಧಾನದ ಭಾವ, ಆ ಸಂಭ್ರಮದ ಜತೆಗೆ ತಮ್ಮ ಮುಂದಿನ ಕನಸುಗಳನ್ನು ಹಂಚಿಕೊಳ್ಳುತ್ತಿದ್ದರು. ಅವರಿಗೆ ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಾ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರು. ಕೆಲವರಿಗೆ ಉನ್ನತ ಶಿಕ್ಷಣ, ಪಿಎಚ್‌ಡಿ ಮಾಡುವಾಸೆ, ಇನ್ನು ಕೆಲವರಿಗೆ ಉದ್ಯೋಗ ಗಿಟ್ಟಿಸಿಕೊಳ್ಳುವ ತವಕ. ತಮ್ಮ ಓದಿನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕ ಸಾರ್ಥಕ ಭಾವದಲ್ಲಿ ಸಾಧಕರಿದ್ದರು. ಮುಂದಿನ ಗುರಿಯ ಕನಸುಗಳನ್ನು ಹಂಚಿಕೊಂಡರು. ಅವರೆಲ್ಲಾ ವಿವಿ ಆವರಣದಲ್ಲಿ ಪಾಲಕರು, ಗೆಳೆಯರೊಂದಿಗೆ ಫೋಟೊ ತೆಗಿಸಿಕೊಂಡು ಸಂಭ್ರಮಿಸುವ ದೃಶ್ಯಗಳು ಕಂಡುಬಂದವು.