ಬಳ್ಳಾರಿ ; ದೇಶದ ಅಭಿವೃದ್ದಿಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜತೆ ಮಾಧ್ಯಮ ಕ್ಷೇತ್ರ ನಾಲ್ಕನೇ ಅಂಗವಾಗಿ ಶ್ರಮಿಸುತ್ತಿದೆ. ಈ ಕ್ಷೇತ್ರದಲ್ಲಿ ದುಡಿಯುವ ಜತೆಯಲ್ಲಿ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಕೆಲಸದ ಒತ್ತಡ ನಿವಾರಣೆ ಸಾಧ್ಯ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕಾನಿಪದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗ ಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಕಲಾವಿದರನ್ನು ಗುರುತಿಸಿ ಪತ್ರಕರ್ತರ ಸಂಘದಿಂದ ಗೌರವಿಸಿದ್ದು ಉತ್ತಮ ಕೆಲಸವಾಗಿದೆ. ಜಿಲ್ಲೆಯಲ್ಲಿ ಮಾಧ್ಯಮದವರ ಸಹಕಾರ ಜಿಲ್ಲಾಡಳಿತಕ್ಕಿದೆ. ಚುನಾವಣೆಯಾಗಲಿ, ಅಭಿವೃದ್ಧಿ ಕಾರ್ಯವಾಗಲಿ, ಮಾಧ್ಯಮದವರ ತೊಡಗಿಸಿಕೊಳ್ಳುವಿಕೆ ಸ್ಮರಣೀಯ. ಸರ್ಕಾರದ ಯೋಜನೆಗಳನ್ನು ಜನತೆಗೆ ಹೆಚ್ಚು ತಲುಪುವಂತೆ ಮಾಡಿ, ಜಿಲ್ಲೆಯ ಅಭಿವೃದ್ಧಿಯಲ್ಲಿ ಭಾಗಿಯಾಗಿ ಎಂದು ಸಲಹೆ ನೀಡಿದರು.
ಕಲಾವಿದ ಪುರುಷೋತ್ತಮ ಹಂದ್ಯಾಳ್ ಮಾತನಾಡಿ, ಮಾಧ್ಯಮ ಪ್ರತಿನಿಧಿಗಳಲ್ಲೂ ಸಾಂಸ್ಕೃತಿಕ ಮನಸ್ಸು ಇರುತ್ತೆ ಅದನ್ನು ಹೊರಗೆ ತರಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪತ್ರಕರ್ತರೇ ವೀರ ಅಭಿಮನ್ಯ ಕಾಳಗ ಬಯಲಾಟ ಪ್ರದರ್ಶನ ನಡೆಸಿ ಗಮನ ಸೆಳೆದಿದ್ದರು. ದನಕಾಯುವವರ ದೊಡ್ಡಾಟ ನಾಟಕ ಪ್ರದರ್ಶನವನ್ನೂ ಮಾಡಿದ್ದಾರೆ. ಒತ್ತಡದ ಬದುಕಿನ ನಡುವೆ ಮನಸ್ಸನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕು ಎಂದರು.