ಬಳ್ಳಾರಿ ; ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕನ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರಲಿ. ಆದರೆ, ಯಾವುದೇ ಅನುಮಾನ ಉಳಿಯಬಾರದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಪ್ರಕರಣದ ತನಿಖೆಯಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುವ ಕೆಲಸವಾಗಬಾರದು. ಹಿಂದುಗಳ ಶ್ರದ್ಧಾಕೇಂದ್ರ ಧರ್ಮಸ್ಥಳಯಾಗಿದ್ದು ದಕ್ಕೆಯಾಗದೆ ಸತ್ಯಾಂಶ ಹೊರಬರಲಿ. ಪ್ರಕರಣದಲ್ಲಿ ಪ್ರಭಾವಿ ಹಾಗೂ ಪೊಲೀಸರ ಕೈವಾಡವಿದೆ ಎಂಬುದು ತನಿಖೆ ಬಳಿಕ ಚರ್ಚೆಯಾಗಬೇಕು ಎಂದು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ವಿರೋಧಿ ಪ್ರತ್ಯೇಕ ಬಣವಿಲ್ಲ. ಆದರೆ, ಎಲ್ಲರೂ ಬಿಜೆಪಿ ಶುದ್ಧಿಕರಣಗೊಳ್ಳಬೇಕು ಎಂಬ ಅಭಿಪ್ರಾಯವಿದೆ. ಆದ್ದರಿಂದ, ರಾಜ್ಯದಲ್ಲಿ ಶುದ್ಧಿಕರಣ ಪ್ರಕ್ರಿಯೆ ನಡೆಯುತ್ತಿದೆ. ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ ಹೈಕಮಾಂಡ್ ಜತೆ ಚರ್ಚಿಸಿ ನನ್ನನ್ನು ಬಿಜೆಪಿಗೆ ಕರೆ ತರುವ ಬಗ್ಗೆ ಗೊತ್ತಿಲ್ಲ . ನಾನು ಯಾವ ಟೀಂ ಜತೆ ಗುರುತಿಸಿಕೊಂಡಿಲ್ಲ ಎಂದರು.
ಹಿಂದುತ್ವ ಹಾಗೂ ಬಿಜೆಪಿ ವಿರುದ್ಧ ಯಾವ ನಾಯಕರಿಲ್ಲ. ಆದರೆ, ರಾಜ್ಯದಲ್ಲಿ ಬಿಜೆಪಿ ವ್ಯವಸ್ಥೆ ಸರಿಯಿಲ್ಲ ಎಂಬ ಅಭಿಪ್ರಾಯವಿದೆ. ಹತ್ತಾರು ವರ್ಷ ತಪಸ್ಸು ಮಾಡಿ ಬಿಜೆಪಿ ಪಕ್ಷ ಕಟ್ಟಲಾಗಿದೆ. ತಪಸ್ಸಿಗೆ ಫಲವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಸರಿ ಹೊಂದುವ ವಿಶ್ವಾಸವಿದೆ ಎಂದರು.