ಬಳ್ಳಾರಿ : ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಮತ್ತು ನಿರಾಮಯ ಆರೋಗ್ಯ ವಿಮಾ ಯೋಜನೆಯು ಕರ್ನಾಟಕ ಸರ್ಕಾರದಲ್ಲಿ ಜಾರಿಯಲ್ಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು, ಕರ್ನಾಟಕದಲ್ಲಿ ಅಂಗವಿಕಲರಿಗೆ ಸರ್ಕಾರ ನೀಡುವ ಆರೋಗ್ಯ ಮತ್ತು ವಿಮಾ ಯೋಜನೆಗಳ ಕುರಿತು ಶುಕ್ರವಾರ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಅಂಗವಿಕಲತೆ ನಿವಾರಣ ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ ಶಸ್ತ್ರಚಿಕಿತ್ಸೆಯಿಂದ ವಿಕಲಚೇತನತೆ ನಿವಾರಣೆ ಅಥವಾ ಕಡಿಮೆ ಮಾಡಿಕೊಳ್ಳಲು ನಗಳೀರಿನ ಸಂಜಯಗಾಂಧಿ ಅಪಘಾತ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಎಲ್ಲ ಸರ್ಕಾರಿ ಆಸ್ಪತ್ರೆ ಅಥವಾ ಕರ್ನಾಟಕದ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಂದು ಲಕ್ಷ ರೂ. ದವರೆಗೆ ಸಹಾಯಧನ ನೀಡಲಾಗುವುದು ಎಂದರು.
ದೇಶದಲ್ಲೇ ಪ್ರಪ್ರಥಮಬಾರಿಗೆ ಅಂಗವಿಕಲ ಮಕ್ಕಳ ಪೋಷಕರಿಗೆ ತಲಾ 1000 ರೂ. ಗೌರವ ಧನ ರಾಜ್ಯ ಸರ್ಕಾರ ಪಾವತಿಸುತ್ತಿರುವುದು ಶ್ಲಾಘನೀಯ. ವಿಮಾ ಸೌಲಭ್ಯವು 1 ಲಕ್ಷ ರೂ. ದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಮನವಿ ಮಾಡಿದರು.