ಸಚಿವ ತಂಗಡಗಿ ಅಣೆ ಮಾಡಲಿ

Published on

ಬಳ್ಳಾರಿ : ಕನ್ನಡ ಮತ್ತು ಸಂಸ್ಕ್ರತಿ ಸಚಿವ ಶಿವರಾಜ್ ತಂಗಡಗಿ ಅವರು ಸ್ವಾಮೀಜಿಗಳಿಂದ ಕಮಿಷನ್‌ಗೆ ಬೇಡಿಕೆಯಿಟ್ಟಿಲ್ಲ ಎಂಬುದಾದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಅಣೆ ಮಾಡಲಿ ಎಂದು ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಸವಾಲು ಹಾಕಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸನಾತನ ಧರ್ಮದ ಮೇಲೆ ಶಿವರಾಜ್ ತಂಗಡಗಿ ಅವರಿಗೆ ನಂಬಿಕೆಯಿದ್ದರೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಅಣೆ ಮಾಡಲಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಬಂದ ನಂತರ ಜಿಲ್ಲೆಯ ದೇವಸ್ಥಾನಗಳಿಗೆ ಅನುದಾನ ನೀಡುತ್ತಿಲ್ಲ. ದೇವರ ವಿಷಯದಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯ ವೈ.ಸತೀಶ್ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಅವರು ಗಾಣಿಗರ ಚಾರಿಟೇಬಲ್ ಟ್ರಸ್ಟ್‌ಗೆ ಮೂರು ಕೋಟಿ ರೂ. ನೀಡಿದ್ದರು. ಆರಂಭದಲ್ಲಿ ಎರಡು ಕೋಟಿ ರೂ. ಹಣ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು. ಉಳಿದ ಒಂದೂವರೆ ಕೋಟಿ ರೂ. ಹಣ ಬಿಡುಗಡೆಗಾಗಿ ನೆಲಮಂಗಲದ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠ ಪೂರ್ಣನಾಂದ ಪುರಿ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಬಳಿಕ ಆರ್ಥಿಕ ಇಲಾಖೆಯೂ ಕೂಡ ಅನುಮೋದನೆ ನೀಡಿದರೂ ಕೂಡ ಬಿಡುಗಡೆಯಾಗಿಲ್ಲ. ಆದ್ದರಿಂದ, ಸ್ವಾಮೀಜಿ ನ್ಯಾಯಾಲಯ ಮೊರೆ ಹೋಗಿದ್ದರಿಂದ ಒಂದೂವರೆ ಕೋಟಿ ರೂ. ಅಥವಾ ಶೇ. 6.5 ಬಡ್ಡಿ ನೀಡುವಂತೆ ಆದೇಶಿಸಿದೆ. ಹಣ ನೀಡಲು ನೇರವಾಗಿ ಕಮಿಷನ್ ಕೇಳುತ್ತಿದ್ದಾರೆ ಎಂದು ಸ್ವಾಮೀಜಿ ತಂಗಡಗಿ ವಿರುದ್ಧ ಆರೋಪಿಸಿದ್ದಾರೆ. ಆದ್ದರಿಂದ, ನೈತಿಕ ಹೊಣೆ ಹೊತ್ತು ಸಚಿವ ಶಿವರಾಜ್ ತಂಗಡಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ ಕುಮಾರ ಮೋಕಾ, ಮುಖಂಡರಾದ ಕೆ.ಎಸ್.ದಿವಾಕರ, ಮಲ್ಲೇಶ, ಗುರ‌್ರಂ ವೆಂಕಟರಮಣ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net