ಗ್ಯಾರಂಟಿಗಳು ವ್ಯಾಪಕ ಪ್ರಚಾರವಾಗಲಿ

Published on

ಬಳ್ಳಾರಿ ; ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಿಂದ ಬಡ ಜನರ ಏಳಿಗೆಗೆ ಪೂರಕವಾಗಿದ್ದು, ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗ್ರಾಪಂ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅರಿವು ಮತ್ತು ಪ್ರಚಾರ ಮೂಡಿಸುವ ಕಾರ್ಯವಾಗಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಗ್ಯಾರಂಟಿಗಳಿಂದ ಸಾಕಷ್ಟು ಪ್ರಮಾಣದ ಅರ್ಹರು ಇದರ ಲಾಭ ಪಡೆಯುತ್ತಿದ್ದಾರೆ. ಅದೇ ರೀತಿಯಾಗಿ ಹೊರಗುಳಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಗ್ಯಾರಂಟಿ ಯೋಜನೆಗಳ ಲಾಭ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‌ಕುಮಾರ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾದ ಫಲಾನುಭವಿಗಳಿಗೆ ಆ.2023 ರಿಂದ ಡಿ. 2024 ರವರೆಗೆ 2,000 ರೂ. ರಂತೆ ಒಟ್ಟು 43,92,946 ಫಲಾನುಭವಿಗಳಿಗೆ ಮಾಹೆವಾರು ಒಟ್ಟು 8,78,58,92,000 ರೂ. ಗಳು ಸರ್ಕಾರದಿಂದ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. 2025 ರ ಜನವರಿ ತಿಂಗಳ ಹಣವು ಪಾವತಿಯಾಗಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಡಿಸೆಂಬರ್ 2024 ರವರೆಗೆ ಜಿಲ್ಲೆಯಲ್ಲಿ ಒಟ್ಟು 1,81,10,436 ಫಲಾನುಭವಿಗಳಿಗೆ ಇದುವರೆಗೂ ಒಟ್ಟು 292.29 ಕೋಟಿ ರೂ. ಗಳ ಸಹಾಯಧನ ನೀಡಲಾಗಿದೆ. 2025ರ ಜನವರಿ ಮಾಹೆಯ ಡಿಬಿಟಿ ಯ ಅನುದಾನ ಬಿಡುಗಡೆಯಾಗಿಲ್ಲ, ಉಳಿದ ಫೆಬ್ರವರಿ ಮತ್ತು ಮಾರ್ಚ್ ಮಾಹೆಯ ಹೆಚ್ಚುವರಿ ಅಕ್ಕಿಯನ್ನು ರಾಜ್ಯ ಸರ್ಕಾರವು ನಿರ್ದೇಶನದಂತೆ ಅಕ್ಕಿ ವಿತರಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಕೀನಾ ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 3,18,885 ಅರ್ಹ ಗ್ರಾಹಕರಿದ್ದು, ಅದರಲ್ಲಿ ಈವರೆಗೆ (ಮಾ.31 ರ ವರೆಗೆ) 2,82,956 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. 35,929 ಗ್ರಾಹಕರು ನೋಂದಾಯಿಸಲು ಬಾಕಿಯಿದ್ದಾರೆ. ಸರ್ಕಾರವು 2023ರ ಆಗಸ್ಟ್‌ನಿಂದ 2025ರ ಮಾರ್ಚ್ವರೆಗೆ ಒಟ್ಟು 277.02 ಕೋಟಿ ರೂ. ಪಾವತಿಸಿದೆ ಎಂದು ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net