ಬಳ್ಳಾರಿ : ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಹತ್ತು ಸಾವಿರ ರೂ. ವೇತನ ಜಾರಿಗೊಳಿಸಬೇಕು ಸೇರಿದಂತೆ ನಾನಾ ಬೇಡಿಕೆಗಳಿಗೆ ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮಾತನಾಡಿ, ಕಳೆದ ಜನವರಿ ತಿಂಗಳಲ್ಲಿ ಆಶಾ ಕಾರ್ಯಕರ್ತೆಯರ ಮುಷ್ಕರದ ವೇಳೆ ಸಿಎಂ ಸಿದ್ದರಾಮಯ್ಯ ಸಭೆ ಕರೆದು ಹತ್ತು ಸಾವಿರ ರೂ. ವೇತನ ಖಾತ್ರಿ ಮಾಡಿ, ಏಪ್ರೀಲ್ ತಿಂಗಳಿಂದ ಜಾರಿಗೊಳಿಸಲಾಗುವುದು ಹಾಗೂ ಹೆಚ್ಚುವರಿ ಕೆಲಸ ಮಾಡಿದವರಿಗೆ ಗೌರವ ಧನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಸರ್ಕಾರದಿಂದ ಯಾವುದೇ ಆದೇಶ ನೀಡಿಲ್ಲ. ಸಿಎಂ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಆರೋಪಿಸಿದರು.
ರಾಜ್ಯದ ಪ್ರತಿ ಆಶಾ ಕಾರ್ಯಕರ್ತೆಯರಿಗೆ ಜನಸಂಖ್ಯೆ ನೀಡುವ ನೆಪದಲ್ಲಿ , ಅವೈಜ್ಞಾನಿಕದಿಂದ ಕೂಡಿದ ಆಶಾ ಕಾರ್ಯಕರ್ತೆಯರ ಸಮೀಕ್ಷೆ ಆದೇಶವನ್ನು ಹಿಂಪಡೆಯಬೇಕು. ಕಳೆದ ಹದಿನೈದು ವರ್ಷಗಳಿಂದ ರಾಜ್ಯದ ಜನರಿಗಾಗಿ ದುಡಿದ ಕಾರ್ಯಕರ್ತೆಯರನ್ನು ಸರ್ಕಾರ ಅಗೌರವದಿಂದ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಇಂತಹ ಕ್ರಮಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ಬಳಿಕ ಎಡಿಸಿ ಮಹಮ್ಮದ್ ಎನ್. ಜುಬೇರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.