ಕುಡಿವ ನೀರು ಸಮರ್ಪಕವಾಗಿರಲಿ

Published on

ಬಳ್ಳಾರಿ; ಬೇಸಿಗೆ ಹಿನ್ನೆಲೆಯಲ್ಲಿ ವಿವಿಧ ತಾಲೂಕು ಹಾಗೂ ಗ್ರಾಮಗಳಲ್ಲಿ ಕುಡಿವ ನೀರಿನ ಪೂರೈಕೆ ಸಮಪರ್ಕವಾಗಿರಬೇಕು ಹಾಗೂ ನಿರ್ವಹಣೆಯಲ್ಲಿ ಯಾವುದೇ ಲೋಪವಾಗುವಂತಿಲ್ಲ ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡೊದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದರು.

ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿವ ನೀರು, ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿವ ನೀರು ಸಮಸ್ಯೆಯಾದಲ್ಲಿ ನೀರಿನ ಟ್ಯಾಂಕರ್ ಇರಿಸಿಕೊಳ್ಳಬೇಕು. ಅಗತ್ಯ ಮೇವಿನ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಕುಡಿವ ನೀರಿಗೆ ಸಮಸ್ಯೆ ಬರಬಹುದಾದಂತಹ ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ಆಯಾ ತಾಲೂಕು ತಹಸೀಲ್ದಾರರು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರಸಭೆ, ಪುರಸಭೆ ಹಾಗೂ ಪಪಂ ಮುಖ್ಯಾಧಿಕಾರಿಗಳು ಭೇಟಿ ನಡೆಸಬೇಕು ಎಂದರು.

ಗ್ರಾಮೀಣ ಭಾಗಗಳಲ್ಲಿ ಆರ್‌ಒ ಘಟಕಗಳನ್ನು ಶುದ್ಧಗೊಳಿಸಿಟ್ಟುಕೊಳ್ಳಬೇಕು. ಕುಡಿವ ನೀರು ಎಲ್ಲೂ ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕು. ಮುಖ್ಯವಾಗಿ ಬಳ್ಳಾರಿ ತಾಲೂಕಿನ ಹಲಕುಂದಿ, ಹೊನ್ನಳ್ಳಿ, ಹೊನ್ನಳ್ಳಿ ತಾಂಡಾ ಗ್ರಾಮಗಳಲ್ಲಿ ಉಲ್ಬಣವಾಗಬಹುದಾದ ಕುಡಿವ ನೀರಿನ ಸಮಸ್ಯೆ ಪರಿಹರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.

ಕುಡಿವ ನೀರು ಪೂರೈಕೆ ಸಂಬಂಧಿಸಿದಂತೆ ವಿದ್ಯುತ್ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಜೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ನಿಗದಿತ ಅವಧಿಯೊಳಗೆ ಸಮಸ್ಯೆ ಪರಿಹರಿಸಲು ಕ್ರಮವಹಿಸಬೇಕು.

ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಸರ್ಕಾರಿ ಕಚೇರಿಗಳ ಸಮಯವು ಬದಲಾಗಿರುವುದರಿಂದ ಅವಶ್ಯಕತೆ ಬಂದಾಗ ಸಮಯ ಮೀರಿಯೂ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಉದಾಸೀನತೆ ತೋರುವಂತಿಲ್ಲ ಎಂದು ಎಚ್ಚರಿಸಿದರು.

ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ಮಾತನಾಡಿ, ಆಯಾ ಗ್ರಾಪಂ ಮಟ್ಟದಲ್ಲಿನ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗಳ ಭರ್ತಿಗೆ ಕ್ರಮವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಕುರಿತು ಅಧಿಕಾರಿಗಳು ವ್ಯಾಟ್ಸ್ ಆಪ್ ಗುಂಪು ರಚಿಸಿ ಎಲ್ಲರು ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net