ಲೈಂಗಿಕ ದೌರ್ಜನ್ಯ ಕೊನೆಗೊಳ್ಳಲಿ

Published on

ಬಳ್ಳಾರಿ; ಹೆಣ್ಣು ಮತ್ತು ಗಂಡು ನಡುವಿನ ಅಸಮಾನತೆ ಯಾವಾಗ ಕೊನೆಗಣಿಸುತ್ತೇವೋ ಅವಾಗ ಲೈಂಗಿಕ ಅಪರಾಧಗಳು ಕಡಿಮೆ ಆಗುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಎ.ಮುರಿಗೆಪ್ಪ ಹೇಳಿದರು.

ಇಲ್ಲಿನ ಗಾಂಧಿ ಭವನದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್‌ಯಿಂದ ಬುಧವಾರ ಹಮ್ಮಿಕೊಂಡಿದ್ದ ಯುವಜನ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಯಾವ ಸ್ಥಳಗಳು ಉಳಿದಿಲ್ಲ. ಮಠ-ಮಾನ್ಯಗಳು, ಶಾಲಾ-ಕಾಲೇಜುಗಳು, ಕೆಲಸ ಮಾಡುವ ಸ್ಥಳಗಳು ಎಲ್ಲ ಕಡೆಯೂ ಮಹಿಳೆಯರನ್ನು ಕೀಳಾಗಿ ನೋಡುವ ಸಂಸ್ಕೃತಿ ಸಮಾಜದಲ್ಲಿ ಬೆರೂರಿದೆ ಎಂದು ತಿಳಿಸಿದರು.

ಮಕ್ಕಳ ತಜ್ಞ ಡಾ.ಯೋಗಾನಂದರೆಡ್ಡಿ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೊಲೆಗಳು ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ನಡೆಯುತ್ತಿದೆ. ಆದರೆ, ದುರಂತ ಎಂದರೆ ಅತ್ಯಾಚಾರಗಳ ರಾಜಧಾನಿಯಾಗಿ ನಮ್ಮ ದೇಶವೇ ಇಂತಹ ಕುಕೃತ್ಯದಲ್ಲಿ ವಿಶ್ವದಲ್ಲೇ ಮುಂದಿದೆ. ಪ್ರತಿ 20 ನಿಮಿಷಕ್ಕೆ ಒಬ್ಬ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅವೂ ಕೂಡ ದಾಖಲಾದ ಪ್ರಕರಣಗಳು ಮಾತ್ರ. ಇನ್ನೂ ದಾಖಲಾಗದೆ ಇರುವಂತಹವು ಹಲವು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ ಎಂದು ತಿಳಿಸಿದರು.

ಹಲವು ವರ್ಷಗಳು ಪ್ರಕರಣಗಳನ್ನು ಮುಂದೂಡುಕೆಯಿಂದ ಸತ್ಯವನ್ನು ಸುಳ್ಳು ಮಾಡುವ ಎಷ್ಟೋ ಪ್ರಕರಣಗಳನ್ನು ನಾವು ಗಮನಿಸುತ್ತಿದ್ದೇವೆ. ಹೀಗಾದಾಗ ಅಪರಾಧ ಮಾಡುವವರಿಗೆ ಕಾನೂನಿನ ಭಯ ಇಲ್ಲದಂತಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದರು.

ಎಐಡಿವೈಒ ಉಪಾಧ್ಯಕ್ಷ ಡಾ.ಜಿ.ಶಶಿಕುಮಾರ್ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸಬೇಕಾದ ಯುವಕರನ್ನು ಸರ್ಕಾರಗಳು ಮದ್ಯ ಮಾದಕ ವಸ್ತುಗಳ ಚಟಗಳಿಗೆ, ಅಶ್ಲೀಲ ಸಿನೆಮಾ ಸಾಹಿತ್ಯ ಮತ್ತು ಕೋಮುವಾದಗಳಂತಹ ಸಮಾಜಘಾತುಕ ಕೆಲಸಗಳಲ್ಲಿ ಮುಳುಗಿಸಿ, ನಿರುದ್ಯೋಗ, ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದಂತಹ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತದಂತೆ ನೈತಿಕ ಬೆನ್ನೆಲುಬನ್ನು ಮುರಿದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ. ಹಾಗಾಗಿ ಇಂದಿನ ಯುವಕರು ಭಗತ್ ಸಿಂಗ್ ನೇತಾಜಿಯಂತಹ ಮಹಾನ್ ಚೇತನಗಳ ವಿಚಾರಗಳನ್ನು ಅಳವಡಿಸಿಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮುಂದಾಗಬೇಕೆಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net