ಬಳ್ಳಾರಿ : ಮಾನಸಿಕವಾಗಿ ಅಶಕ್ತರಾದರೆ ಅಂತಹವರಿಗೆ ವೈದ್ಯಕೀಯ ಸೌಲಭ್ಯಗಳು ಒಳಗೊಂಡು ಆರೈಕೆ ಮಾಡಲು ಜಿಲ್ಲಾ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿಯ ಮೂಲಕ ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಸದುಪಯೋಗ ಅರ್ಹ ನಾಗರಿಕರು ಪಡೆದುಕೊಳ್ಳಬಹುದು ಎಂದು ಸತ್ರ ನ್ಯಾಯಾಧೀಶ ವಿದ್ಯಾಧರ್ ಶಿರಹಟ್ಟಿ ಹೇಳಿದರು.
ಇಲ್ಲಿನ ಕೇಂದ್ರಕಾರಾಗೃಹದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿಯ ರಚನೆ ಹಾಗೂ ಮೊದಲ ಸಭೆಯಲ್ಲಿ ಮಾತನಾಡಿದರು.
ಕಂದಾಯ ಇಲಾಖೆಯಿಂದ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರತಿನಿಧಿಗಳನ್ನು ಸೂಚಿಸುವ ಮೂಲಕ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯ ಇತರೆ ಸದಸ್ಯರಾಗಿ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮನೋರೋಗ ತಜ್ಞರು, ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಹಾಗೂ ಮನೋ ಸಾಮಾಜಿಕ ಕಾರ್ಯಕರ್ತರು (ಆರೈಕೆದಾರರು) ಸಮಿತಿ ಸದಸ್ಯರಿರುತ್ತಾರೆ ಎಂದು ತಿಳಿಸಿದರು. ಇನ್ನು ಮುಂದೆ ಪ್ರತಿ ತಿಂಗಳು ಸಭೆ ಕೈಗೊಳ್ಳುವ ಜತೆಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯನ್ನೊಳಗೊಂಡಂತೆ ಮಂಡಳಿ ಮುಂದೆ ನಿವೇದನೆ ಕೈಗೊಳ್ಳುವ ಮಾನಸಿಕ ಅಶಕ್ತರ ಕುಂದು ಕೊರತೆಗಳನ್ನು ಪರಿಶೀಲಿಸಿ ನಿಯಮಾನುಸಾರ ಸೌಲಭ್ಯ, ಸಲಹೆ, ಅಗತ್ಯ ನೆರವು ಒದಗಿಸುವ ಕಾರ್ಯವನ್ನು ಮಂಡಳಿಯು ಕೈಗೊಳ್ಳುವುದೆಂದು ತಿಳಿಸಿದರು.