ಬಳ್ಳಾರಿ : ಪಂಚಮಸಾಲಿ ಸಮುದಾಯ ಹಾಗೂ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಕ್ಷಮೆಯಾಚಿಸಲಿ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿಗಳ ಮೀಸಲಾತಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ಮೇಲೆ ಸಿಎಂ ನಿರ್ದೇಶನ ಮೇರೆಗೆ ಎಡಿಜಿಪಿ ಆದೇಶದಂತೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಮೀಸಲಾತಿ ಹೋರಾಟ ನೇತೃತ್ವದ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಆರವಿಂದ ಬೆಲ್ಲದ, ಸಿಸಿ ಪಾಟೀಲ್ ಅವರನ್ನು ಸೇರಿದಂತೆ ಇತರರನ್ನ ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆ ಮಾಡುವುದು ಜನರ ಹಕ್ಕು. ಜನರ ಸಮಸ್ಯೆ ಆಲಿಸಿ ಅವರಿಗೆ ಸಮಾಧಾನ ಹೇಳಿ ಭರವಸೆ ನೀಡಬೇಕಾಗಿರುವುದು ಸಿಎಂ ಕರ್ತವ್ಯ. ಆದರೆ, ಏಕಾಏಕಿ ಲಾಠಿ ಚಾರ್ಜ್ ಮಾಡುವ ಮೂಲಕ ಹೋರಾಟವನ್ನು ಹತ್ತಕ್ಕಿವು ಕೆಲಸ ಮಾಡಿದ್ದಾರೆ. ಸಮಾಜದ ಹಲವರಿಗೆ ಗಾಯಗಳು ಆಗಿವೆ. ಕೂಡಲೇ ಬಂಧಿಸಿದವರನ್ನು ಬಿಡುಗಡೆಗೊಳಿಸಿ ರಾಜ್ಯದ ಜನತೆ ಹಾಗೂ ಸ್ವಾಮೀಜಿ ಅವರನ್ನು ಸಿಎಂ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಗಂಗಾವತಿಯ ಅಂಜನಾದ್ರಿ ಅಭಿವೃದ್ಧಿಗೆ 240 ಕೋಟಿ ರೂ. ಸರ್ಕಾರದಿಂದ ಬಿಡುಗಡೆಗೊಳಿಸಿದೆ. ಬೆಟ್ಟದ ಕೆಳಗಡೆ 70 ಎಕರೆಯಲ್ಲಿ ವಾಲ್ಮೀಕಿ ವನ, 30 ಕೋಟಿ ವೆಚ್ಚದಲ್ಲಿ ಮೆಟ್ಟಿಲು ದುರಸ್ತಿ ಕಾರ್ಯ, ಬಾಲ ರಾಮಮಂದಿರ, ಕನವಕ್ಷನ್ ಹಾಲ್, ಕಾಲು ಮಂಟಪ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳೂ ಆರಂಭವಾಗಿವೆ. ಒಟ್ಟಾರೆ ಈ ಎಲ್ಲ ಕಾಮಗಾರಿಗಳು ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿವೆ ಎಂದರು. ಕಳೆದ ಬಾರಿ ಹನುಮ ಮಾಲೆದಾರರು 1.14 ಲಕ್ಷ ಜನರು ಭೇಟಿ ನೀಡಿದ್ದರು. ಈ ಬಾರಿ ಎರಡು ಲಕ್ಷಕ್ಕೂ ಅಧಿಕ ಮಾಲೆದಾರರು ಭೇಟಿ ನೀಡುವ ಸಾಧ್ಯತೆಯಿದ್ದು ಎಲ್ಲ ರೀತಿಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲಾದ್ಯಕ್ಷ ಅನಿಲ್ ಕುಮಾರ ಮೋಕಾ, ಮುಖಂಡರಾದ ಡಾ.ಎಸ್.ಜೆ.ವಿ. ಮಹಿಪಾಲ್, ಮಲ್ಲೇಶ್ ದಮ್ಮೂರ ಶೇಖರ ಇದ್ದರು.
=====