ವಿಶೇಷ ಚೇತನರಿಗೆ ಶೇ.05 ಅನುದಾನ ಬಳಕೆಯಾಗಲಿ

Published on

ಬಳ್ಳಾರಿ : ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳಡಿ ವಿಶೇಷಚೇತನರಿಗಾಗಿಯೇ ಮೀಸಲಿರಿಸಿದ ಶೇ.05 ಅನುದಾನ ಪರಿಪೂರ್ಣವಾಗಿ ಬಳಕೆಯಾಗಬೇಕು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ ಅನುಷ್ಠಾನದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.

ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ 2016 ರ ಅನುಷ್ಠಾನ ಕುರಿತು ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ವಿಶೇಷ ಚೇತನರ ಏಳಿಗೆಗಾಗಿ ಅಧಿಕಾರಿಗಳು ಕಾಳಜಿ ವಹಿಸಬೇಕು. ಸಮುದಾಯದಲ್ಲಿ 21 ರೀತಿಯ ವಿವಿಧ ಅಂಗವಿಕಲ ವೈಫಲ್ಯತೆ ಕಾಣಬಹುದು. ಅವರ ಕಷ್ಟಕರ ಜೀವನ ಊಹಿಸಲಾರದು. ಹಾಗಾಗಿ ಕಾನೂನುಬದ್ಧವಾಗಿ ಅವರಿಗಿರುವ ಸೌಲಭ್ಯಗಳನ್ನು ತಲುಪಿಸುವ ಮೂಲಕ ಅಧಿಕಾರಿಗಳು ದಾರಿದೀಪವಾಗಬೇಕು ಎಂದರು.

ರಾಜ್ಯ ಸರ್ಕಾರ ಅಧೀನದಲ್ಲಿರುವ ಸುಮಾರು 900 ವಸತಿ ಶಾಲೆಗಳಲ್ಲಿ ಶೇ.25% ಅಂಗವಿಕಲತೆ ಹೊಂದಿದ ಮಕ್ಕಳಿಗೆ ಶೇ.10 ರಷ್ಟು ಶೀಟ್ ಮೀಸಲಾತಿ ಇರಿಸಿ ಉಚಿತ ಶಿಕ್ಷಣ ನೀಡಲು ಅವಕಾಶವಿದೆ. ವಿಶೇಷಚೇತನರ ಮುನ್ನಲೆಗೆ ನಗರಸಭೆ, ಸ್ಥಳೀಯ- ಸಂಸ್ಥೆಗಳ ಶೇ.05 ರ ಅನುದಾನದಲ್ಲಿ ಜಿಲ್ಲಾ ಕೇಂದ್ರದಲ್ಲಿ ಟೈಲರಿಂಗ್ ಹಾಗೂ ವಿವಿಧ ರೀತಿಯ ಉದ್ಯೋಗ ತರಬೇತಿ ನೀಡಬೇಕು. ಇದರಿಂದ ಸ್ವಾವಲಂಬಿ ಉದ್ಯೋಗ ನಡೆಸಲು ಸಹಕಾರಿಯಾಗಲಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಿಂಗಳಲ್ಲಿ ಒಂದು ಬಾರಿಯಾದರೂ ವಿಶೇಷಚೇತನರ ಕುಂದು-ಕೊರತೆ ಸಭೆ ಮಾಡಬೇಕು ಎಂದು ಸಭೆಗೆ ಸೂಚಿಸಿದರು.

ವಿಶೇಷಚೇತನರಿಗಾಗಿ ಭೂಮಿ ಖರೀದಿ, ಗಂಗಾ-ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಡಿಸಿ ಪ್ರಶಾಂತಕುಮಾರ ಮಿಶ್ರಾ ಮಾತನಾಡಿ, ವಿಶೇಷಚೇತನರಿಗೆ ಮಾಸಾಶನ ಸೌಲಭ್ಯ ಮತ್ತು ಪಿಂಚಣಿ ಪಡೆಯಲು ವಿಳಂಬವಾದಲ್ಲಿ ಆಯಾ ಗ್ರಾಪಂ ಮಟ್ಟದ ನಾಡಕಚೇರಿಗೆ ಸಂಪರ್ಕಿಬೇಕು. ನಂತರ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಪರಿಹಾರಕ್ಕಾಗಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net