ಭವಿಷ್ಯ ರೂಪಿಸುವ ಶಕ್ತಿ ಉಪನ್ಯಾಸಕರಿಗಿದೆ

Published on

ಬಳ್ಳಾರಿ ; ಬ್ರಹ್ಮನ ಹಣೆಬರಹ ಆಳಿಸಿ, ವಿದ್ಯಾರ್ಥಿಗಳಿಗೆ ಹೊಸ ಹಣೆಬರಹ ಬರೆಯುವ ಶಕ್ತಿ ಉಪನ್ಯಾಸಕರಿಗೆ ಮಾತ್ರ ಇದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ತೇಜಸ್ವಿ ವಿ. ಕಟ್ಟಿಮನಿ ಹೇಳಿದರು.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಬುಧವಾರ ಆಯೋಜಿಸಿದ್ದ 16ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಪ್ರತಿಯೊಬ್ಬರಿಗೆ ಹುದ್ದೆ ಸೃಷ್ಟಿಸಲು ಪ್ರಧಾನಿ ಹಾಗೂ ಸಿಎಂ ಗಳಿಂದ ಕೂಡ ಆಗಲ್ಲ. ಆದರೆ, ಒಬ್ಬ ಉತ್ತಮ ಉಪನ್ಯಾಸಕನಿಂದ ಮಾತ್ರ ಹಲವು ಅವಕಾಶಗಳನ್ನು ಸೃಷ್ಟಿಸುವ ಶಕ್ತಿಯಿದೆ ಎಂದರು.

ಪ್ರತಿಯೊಬ್ಬ ಉಪನ್ಯಾಸಕರು ಕ್ರೀಯಾಶೀಲರಾಗಿಬೇಕು ಎಂಬುದು ಸಾಬೀತುಪಡಿಸಲು ನಿರಂತರವಾಗಿ ಸಂಶೋಧನೆಗಳು ನಡೆಯಬೇಕು. ವಿದ್ಯಾರ್ಥಿಗಳ ತುಡಿತಕ್ಕೆ ಒಳಪಡುವ ಉಪನ್ಯಾಸಕರಿದ್ದಾರೆ ಮಾತ್ರ, ಶಿಕ್ಷಣದಲ್ಲಿ ಶ್ರೀಮಂತ ವಿವಿಯಾಗಿ ಹೊರಹೊಮ್ಮಲಿದೆ. ದಿನ ನಿತ್ಯವೂ ಮಕ್ಕಳಿಗೆ ಡೈನಾಮಿಕ್ ಪಠ್ಯ ನೀಡುವಲ್ಲಿ ಉಪನ್ಯಾಸಕರು ಸದಾ ಆಸಕ್ತಿ ವಹಿಸಬೇಕು. ಪಠ್ಯದ ಜತೆಯಲ್ಲಿ ದೈನಂದಿನ ಜೀವನ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ವಿವಿಧ ದೇಶಗಳ ಜತೆ ವ್ಯವಹಾರಿಸಲು ಅಂಗ್ಲ ಮತ್ತು ಹಿಂದಿ ಭಾಷೆ ಮುಖ್ಯವಾಗಿದೆ. ಆದರೆ, ಬೇರೆ ಭಾಷೆಗಳಿಗೆ ತನ್ನದೇ ಗೌರವವನ್ನು ನೀಡಬೇಕು. ಇಂದಿನ ಯುವ ಪೀಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿಯಬೇಕಿದೆ. ಕೇವಲ ಅಂಕಗಳಿಗಾಗಿ ಮಾತ್ರ ಶಿಕ್ಷಣ ಸೀಮಿತವಾಗಿರದೇ ನಿಮ್ಮದೇ ಆದ ಕೌಶಲ್ಯಗಳನ್ನು ಬೆಳೆಸಿಕೊಂಡು ಮುಂದೆ ಬರಬೇಕು ಎಂದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುಖ್ಯ ಆಡಳಿತಾಧಿಕಾರಿ ಎಸ್.ಎನ್.ರುದ್ರೇಶ್ ಮಾತನಾಡಿ, ಶಿಕ್ಷಣದ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮುಂದಿನ ದಿನಗಳಲ್ಲಿ ಹೇಗೆ ಮುನ್ನಡೆಸಬೇಕು ಎಂಬುದು ಸವಾಲಾಗಿದೆ. ಹಾಗಾಗಿ ವಿವಿಯು ಉನ್ನತ ಸ್ಥಾನಕ್ಕೆ ಬರಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮನ್ವಯತೆ ಹೊಂದಿ ಕಾರ್ಯನಿರ್ವಹಿಸಬೇಕು ಎಂದರು.

ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ದೇಶದ ವಿವಿಗಳ ಜತೆ ಪೈಪೋಟಿ ನೀಡಬೇಕಾದರೆ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಔಚಿತ್ಯಪೂರ್ಣ ಶಿಕ್ಷಣ ನೀಡುವ ಜವಾಬ್ದಾರಿಯಾಗಿದೆ. ಹೊಸ ರೀತಿಯ ಆವಿಷ್ಕಾರಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ವಿವಿಯಲ್ಲಿ 29 ವಿಭಾಗಗಳಿದ್ದು, ಮುಂದಿನ ದಿನಗಳಲ್ಲಿ 45 ವಿಭಾಗಗಳನ್ನು ಮಾಡುವ ಗುರಿ ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ವೇದಿಕೆ ವರೆಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷಾರಾಂ ಡೋಲು, ವೀರಗಾಸೆ, ಆದಿವಾಸಿ ಬುಡಕಟ್ಟು ಹಕ್ಕಿ ಪಿಕ್ಕಿ ನೃತ್ಯ, ಜೋಗತಿ ನೃತ್ಯ ಪ್ರದರ್ಶನಗೊಂಡವು. ವೇದಿಕೆ ಕಾರ್ಯಕ್ರಮದಲ್ಲಿ ಡಾ.ಅಪ್ಪಗೆರೆ ತಿಮ್ಮರಾಜ ಅವರಿಂದ ‘ ಚೆಲ್ಲಿದರೂ ಮಲ್ಲಿಗೆಯ ಜನಪದ ಗೀತೆಗೆ ’ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಅಲ್ಲದೆ, ಮುಖ್ಯ ಆಡಳಿತಾಧಿಕಾರಿ ಎಸ್.ಎನ್.ರುದ್ರೇಶ್ ಅವರು ಡೋಲು ಬಾರಿಸಿ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ವಿಎಸ್‌ಕೆ ವಿವಿ ಬೆಳೆದು ಬಂದು ಹಾದಿ ಬಗ್ಗೆ ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net