ಜಾತಿರಾಜಕಾರಣ ಬಿಟ್ಟು ಆಸ್ತಿ ವಾಪಸ್ ನೀಡಿ

Published on

ಬಳ್ಳಾರಿ : ಮಾಜಿ ಸಚಿವ ಶ್ರೀರಾಮುಲು ಅವರೇ ಜಾತಿ ರಾಜಕಾರಣ ಬಿಟ್ಟು, ಸಂಕಷ್ಟದ ಪರಿಸ್ಥಿತಿಯಲ್ಲಿ ರೆಡ್ಡಿ ನೀಡಿದ ಆಸ್ತಿಗಳನ್ನು ವಾಪಾಸ್ ನೀಡಿ ಸಮಾಜ ಘನತೆ ಹೆಚ್ಚಿಸಿ ಎಂದು ರೆಡ್ಡಿ ಬೆಂಬಲಿಗ ದರಪ್ಪ ನಾಯಕ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ಜಿ.ಜನಾರ್ದನರೆಡ್ಡಿ ಹಾಗೂ ರಾಮುಲು ನಡುವೆ ಆಸ್ತಿವಿಚಾರದಲ್ಲಿ ಮನಸ್ತಾಪವಾಗಿರುವುದು ನಿಜ. ಕೆಲ ವರ್ಷಗಳ ಹಿಂದೆ ರೆಡ್ಡಿ, ರಾಮುಲು ಹಾಗೂ ಸುರೇಶಬಾಬು ಸಹೋದರರಂತೆ ಇದ್ದರು. ಬಳಿಕ ಅಕ್ರಮ ಗಣಿಗಾರಿಕೆ ಆರೋಪದಡಿ ರೆಡ್ಡಿ ಜೈಲು ಸೇರಿ ಸೆರೆವಾಸ ಅನುಭವಿಸಿ ಬಿಡುಗಡೆಗೊಂಡ ಬಳ್ಳಾರಿಗೆ ಆಗಮಿಸಿದ್ದಾರೆ. ಅಣ್ಣ ತಮ್ಮಂದಿರ ಹಾಗೇ ಜತೆಯಿದ್ದ ವೇಳೆ ಸಂಪಾದಿಸಿದ ಆಸ್ತಿಯನ್ನು ಸಮಪಾಲಿನಂತೆ ರಾಮುಲು ರೆಡ್ಡಿಗೆ ವಾಪಾಸ್ ನೀಡಬೇಕು ಎಂದು ಮನವಿ ಮಾಡಿದರು.

ರಾಮುಲು ಮತ್ತು ರೆಡ್ಡಿ ಇಬ್ಬರ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಪಕ್ಷದ ನಾಯಕರು ಸರಿ ಪಡಿಸುತ್ತಿದ್ದಾರೆ. ಈ ವಿಚಾರವನ್ನು ಜಾತಿ ಹೆಸರಲ್ಲಿ ಎತ್ತಿಕಟ್ಟುವ ಕೆಲಸ ಮಾಡಬಾರದು. ರೆಡ್ಡಿ ಅವರಿಂದ ವಾಲ್ಮೀಕಿ ಸಮಾಜದ ನಾಯಕರು ಸಾಕಷ್ಟು ಬೆಳೆದಿದ್ದಾರೆ. ಒಂದೇ ಸಮುದಾಯದಿಂದ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದರು.

ರೆಡ್ಡಿಯಿಂದ ವಾಲ್ಮೀಕಿ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ರಾಮುಲು ರಾಜಕೀಯ ಬೆಳವಣಿಗೆಗೆ ರೆಡ್ಡಿಯೇ ಕಾರಣ. ಶಾಸಕ ಜನಾರ್ದನರೆಡ್ಡಿ ಅವರು ಜಾತ್ಯಾತೀತ ನಾಯಕ ಆಗಿದ್ದಾರೆ. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಸಮುದಾಯಗಳಿಗೆ ಆರ್ಥಿಕವಾಗಿ ಬಲ ಇರಲಿಲ್ಲ. ಆಗ ರೆಡ್ಡಿ ಅವರು ರಾಜಕೀಯವಾಗಿ ಎಸ್‌ಸಿ, ಎಸ್ಟಿ ಸಮುದಾಯವರನ್ನು ಬೆಳೆಸಿದರು. ಮಾಜಿ ಶಾಸಕ ಸುರೇಶ್ ಬಾಬು, ಶಾಸಕ ಬಿ.ನಾಗೇಂದ್ರ, ನೇಮಿರಾಜ್ ನಾಯ್ಕ, ಚಂದ್ರನಾಯ್ಕ ಅವರನ್ನು ಶಾಸಕರಾಗಿ ಗೆಲ್ಲಿಸಿದರು ಎಂದರು. ಮುಖಂಡರಾದ ವಿಜಯ್ ಕುಮಾರ್, ಅಂಬಣ್ಣ, ನರಸಿಂಹ, ಶೇಕ್ಷವಲಿ, ಚಂದ್ರ, ಹನುಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net