

ನಾನಾ ಸುಗಂಧ ಪುಷ್ಪಗಳಿಂದ ಅಲಂಕೃತಗೊಂಡ ಶ್ರೀನಿವಾಸ ಸ್ವಾಮಿಯ ಮೂರ್ತಿ
ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಾಲಯದಲ್ಲಿ ಗುರುವಾರ ಮತ್ತು ಶುಕ್ರವಾರ ಪುಷ್ಪಯಾಗ ಕಾರ್ಯಕ್ರಮ ನಡೆದು, ಶ್ರೀನಿವಾಸಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು.
ಶೋಡಷೊಪಚಾರ ಅರ್ಚನೆಯಲ್ಲಿ ಅಚಾತುರ್ಯದಿಂದ ಉಂಟಾದ ದೋಷ ನಿವಾರಣೆಯ ಪ್ರಾಯಶ್ಚಿತ್ತಕ್ಕಾಗಿ ಈ ಪುಷ್ಪಯಾಗ ನಡೆಸಲಾಯಿತು. ಕೆಂಪು ಮತ್ತು ಬಿಳಿ ತಾವರೆ, ಸಂಪಿಗೆ, ಮಲ್ಲಿಗೆ, ಜಾಜಿ, ನಂದಿವರ್ಧನ, ಮದುಗ, ಕುಮುದ ಪುಷ್ಪಗಳು, ತುಳಸಿ, ಕಂಪು ಕಣಗಿಲೆ, ಬಿಲ್ವಪತ್ರೆ, ಮರುಗ, ದವನ, ಕನಕಾಂಬರ, ಗುಲಾಬಿ ಮೊದಲಾದ ಹೂವುಗಳನ್ನು ಪುಷ್ಪಯಾಗಕ್ಕೆ ಬಳಸಿಕೊಳ್ಳಲಾಯಿತು. ಇಡೀ ದೇವಾಲಯವನ್ನು ಈ ಎಲ್ಲ ಹೂವುಗಳಿಂದ ಅಲಂಕರಿಸಿದ್ದರಿಂದ ಎಲ್ಲವೂ ಪುಷ್ಪಮಯವಾಗಿ ಗೋಚರಿಸಿತು.
ಎರಡೂ ದಿನ ಬೆಳಗ್ಗೆ 6 ರಿಂದ 8 ಗಂಟೆ ವರೆಗೆ ಸುಪ್ರಭಾತ, ತೋಮಲ ಸೇವೆ, ಅರ್ಚನೆ, 8 ರಿಂದ ತಿರುಪ್ಪಾವಡ, 9ರಿಂದ ಸ್ನಪನ ತಿರುಮಂಜನ, ಮಧ್ಯಾಹ್ನ 3ಕ್ಕೆ ಕಲ್ಯಾಣೋತ್ಸವ, ಸಂಜೆ ಗ್ರಾಮೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆದವು. ನೂರಾರು ಭಕ್ತರು ಅಲಂಕೃತ ಶ್ರೀನಿವಾಸ ಸ್ವಾಮಿಯ ಮೂರ್ತಿ ಮತ್ತು ದೇಗುಲದ ಆವರಣವನ್ನು ಕಣ್ತುಂಬಿಕೊಂಡರು.
ಶ್ರೀಹರಿಗೆ ಪ್ರಿಯವಾದ
ಪುಷ್ಪಯಾಗ ಪೂಜೆ ಶ್ರೀಹರಿಗೆ ಅತ್ಯಂತ ಪ್ರೀಯವಾದದ್ದು. ಇದನ್ನು ನೆರವೇರಿಸುವುದರಿಂದ ಭಕ್ತರ ಸರ್ವ ಕೋರಿಕೆಗಳು ಈಡೇರುತ್ತವೆ. ಸರ್ವ ದೋಷಗಳೂ ನಿವಾರಣೆಯಾಗುತ್ತವೆ. ಸರ್ವ ಯಜ್ಞಗಳನ್ನು ನೆರವೇರಿಸಿದ ಪುಣ್ಯ ಇದರಿಂದ ಪ್ರಾಪ್ತವಾಗುತ್ತದೆ. ಸರ್ವರಿಗೂ ಸಂತೋಷ ಲಭಿಸಿ, ಅಭಿವೃದ್ಧಿ ದೊರಕುತ್ತದೆ. ನಾನಾ ಉಪದ್ರವಗಳು ನಿವೃತ್ತಿಯಾಗಿ, ಶಾಂತಿ ಸಂಚಯವಾಗುತ್ತದೆ. ಇದು ಆಯುರ್ವೃದ್ಧಿಯನ್ನೂ ನೀಡುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.