

ಬಳ್ಳಾರಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕಾರು ಹತ್ತಿಸಿ ರೈತರ ಬಲಿಪಡೆದ ಪ್ರಕರಣ ಖಂಡಿಸಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಎಸ್‌ಯುಸಿಐ(ಸಿ)ಮತ್ತು ಆರ್‌ಕೆಎಸ್ ಸಂಘಟನೆ ಮಂಗಳವಾರ ಪ್ರತಿಭಟನೆ ನಡೆಸಿತು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎ.ದೇವದಾಸ್ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರೈತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ರೈತ ಕಾರ್ಮಿಕ ವಿರೋಧಿ ಮೂರು ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ಮಸೂದೆ ವಿರುದ್ಧ ದೆಹಲಿಯಲ್ಲಿ ನೂರಾರು ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಕಾರು ಹರಿಸಿ, ಪ್ರಜಾಪ್ರಭುತ್ವದ ಕಗ್ಗೂಲೆ ಮಾಡಿದ್ದಾರೆ. ಹೊಸ ಕಾಯ್ದೆಗಳಿಂದ ದೇಶದ ಸಾಮಾನ್ಯಜನರಿಗೆ ಮಾರಕ. ಶಿಕ್ಷಣ, ಆರೋಗ್ಯ, ಖಾಸಗೀಕರಣದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ನಿತ್ಯ ಬಡವರು ಪಡಬಾರದ ಕಷ್ಟಗಳನ್ನು ಎದುರಿಸುವಂತಾಗಿದೆ ಎಂದು ಕಿಡಿಕಾರಿದರು.
ಆರ್‌ಕೆಎಸ್ ಜಿಲ್ಲಾ ಕಾರ್ಯದರ್ಶಿ ಈ.ಹನುಮಂತಪ್ಪ ಮಾತನಾಡಿ, ರೈತರ ಮೇಲೆ ಕಾರು ಹತ್ತಿಸಲು ಕಾರಣವಾದ ಗೃಹ ಖಾತೆ ರಾಜ್ಯ ಸಚಿವರು ಮತ್ತು ಅವರ ಬೆಂಬಲಿಗರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಸಿದರು.
ಆರ್‌ಕೆಎಸ್‌ನ ಜಿಲ್ಲಾ ಮುಖಂಡ ಗೋವಿಂದ, ಎಸ್‌ಯುಸಿಐ(ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಒ.ಮಂಜುಳಾ, ಡಾ.ಪ್ರಮೋದ್, ಶಾಂತಾ, ಆರ್‌ಕೆಎಸ್‌ನ ಕುರುಗೋಡು ತಾಲೂಕು ಅಧ್ಯಕ್ಷ ಬಸಣ್ಣ, ಕಾರ್ಯದರ್ಶಿ ಕಾಸಿಂಸಾಬ್, ಜಗದೀಶ್, ಪಂಪಾಪತಿ, ವಿದ್ಯಾ, ವಿಜಯಲಕ್ಷ್ಮೀ ಇತರರಿದ್ದರು.