ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಬ್ದ

Published on

ಬಳ್ಳಾರಿ : ವೇತನ ಪರಿಷ್ಕರಣೆ ಹಾಗೂ 38 ತಿಂಗಳ ಹಿಂದಿನ ಬಾಕಿ ಬಿಡುಗಡೆಗೆ ಆಗ್ರಹಿಸಿ, ರಾಜ್ಯ ಸಾರಿಗೆ ಜಂಟಿ ಕ್ರಿಯಾ ಸಮಿತಿಗಳ ನೌಕರರು ಕರೆ ಹಿನ್ನೆಲೆ ಸಾರಿಗೆ ಮುಷ್ಕರಕ್ಕೆ ಜಿಲ್ಲಾದ್ಯಂತ ಸಾರಿಗೆ ನೌಕರರಿಂದ ಭಾಗಶಃ ಬೆಂಬಲ ದೊರೆತಿದೆ.

ನಗರದ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್, ಕ್ರೂಸರ್ ವಾಹನ ಹಾಗೂ ಪ್ಯಾಸೆಂಜರ್ ಆಟೋಗಳು ರಾರಾಜಿಸಿದವು. ಬೆಂಗಳೂರು, ಕೂಡ್ಲಿಗಿ, ಹೊಸಪೇಟೆ, ಸಂಡೂರು, ಸಿರಗುಪ್ಪ, ಕುರುಗೋಡು, ಸಿಂಧನೂರಿಗೆ ಸಂಚಾರಿಸಲು 45 ಖಾಸಗಿ ಬಸ್‌ಗಳು ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ ಐವತ್ತು ಕ್ರೂಸರ್ ವಾಹನಗಳು ಹಾಗೂ ನಗರದ ಹತ್ತು ಕಿ.ಮೀ. ವ್ಯಾಪ್ತಿಯೊಳಗೆ ಸಂಚರಿಸಲು ಪ್ಯಾಸೆಂಜರ್ ಆಟೋಗಳ ಸಂಚಾರಕ್ಕೆ ಆರ್‌ಟಿಒ ಇಲಾಖೆ ವ್ಯವಸ್ಥೆ ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಸಂಚರಿಸದೆ ಇದ್ದರಿಂದ ನಗರಾದ್ಯಂತ ಆಟೋಗಳ ಸಂಚಾರ ದಟ್ಟಣೆಯಿಂದ ಕೂಡಿತ್ತು. ಅಲ್ಲದೆ, ಕ್ರೂಸರ್ ವಾಹನಗಳು ನಗರದ ಹಳೆಯ ಬಸ್ ನಿಲ್ದಾಣದಿಂದನೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸುವುದು ಕಂಡು ಬಂತು. ಆಂಧ್ರದ ಸಾರಿಗೆ ಬಸ್‌ಗಳು ಯಥಾಸ್ಥಿತಿಯಂತೆ ಸಂಚರಿಸಿದವು. ಕೆಎಸ್‌ಆರ್‌ಟಿಸಿ ಟಿಕೆಟ್ ದರದಂತೆ ಪ್ರತಿಯೊಂದು ಖಾಸಗಿ ವಾಹನಗಳಿಗೂ ನಿಗದಿ ಮಾಡಲಾಗಿತ್ತು. ಹೆಚ್ಚಿನ ದರ ವಸೂಲಿ ಮಾಡುವವರ ಮೇಲೆ ಕ್ರಮವಹಿಸಲು ಆರ್‌ಟಿಒ ಇಲಾಖೆ ಅಧಿಕಾರಿಗಳು ನಗರದ ಬಸ್ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸಿದರು.

ಶಿಕ್ಷಣ ಇಲಾಖೆಗೂ ಬಿಸಿ : ಜಿಲ್ಲೆಯಲ್ಲಿ ಸಾರಿಗೆ ಮುಷ್ಕರ ಹಿನ್ನೆಲೆ ನಗರದ ಬಹುತೇಕ ಶಾಲಾ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಗ್ರಾಮೀಣ ಪ್ರದೇಶ ಹಾಗೂ ನಗರದ ವಸತಿ ನಿಲಯದಿಂದ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು ಕಾಲೇಜಿಗೆ ರಜೆ ಘೋಷಿಸಿ ಮನೆ ಹಾಗೂ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡರು. ಗ್ರಾಮದ ಸಮೀಪದಲ್ಲಿ ಪ್ರೌಢ ಶಾಲೆಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಬಸ್‌ಗಳ ಸಂಚಾರ ಕೊರೆತೆಯಿಂದ ನೆಡೆದುಕೊಂಡು ಶಾಲೆಗೆ ಹೊರಟರು. ಜಿಲ್ಲೆಯ ಕೆಲ ಖಾಸಗಿ ಶಾಲೆಗಳಲ್ಲಿಯೂ ಮಕ್ಕಳು ಗೈರಾದರು. ಶಿಕ್ಷಕರು ಹಾಗೂ ಸರ್ಕಾರಿ, ಖಾಸಗಿ, ಬ್ಯಾಂಕ್ ನೌಕರರು ಸಮೀಪದ ಗ್ರಾಮಗಳಿಗೆ ತೆರೆಳಲು ಪರ್ಯಾಯವಾಗಿ ಬೈಕ್ ಹಾಗೂ ವಾಹನದಲ್ಲಿ ಪ್ರಯಾಣಿಸಿದರು. ಮುಷ್ಕರದ ಅರಿವಿಲ್ಲದೇ ಬಂದಿರುವ ಪ್ರಯಾಣಿಕರು ನಗರದ ಪ್ರಮುಖ ವೃತ್ತಗಳಲ್ಲಿ ಖಾಸಗಿ ಬಸ್‌ಗಳಿಗೆ ಕಾಯುತ್ತಿದ್ದರು.

ಬಾಕ್ಸ್ : ಜಿಲ್ಲೆಯ ನಗರದ ಮೂರು ಹಾಗೂ ಕಂಪ್ಲಿ, ಸಿರಗುಪ್ಪ, ಕುರುಗೋಡು ತಲಾ ಒಂದು ಸೇರಿ ಆರು ಘಟಕಗಳಿಂದ 118 ಕೆಎಸ್‌ಆರ್‌ಟಿಸಿ ಬಸ್‌ಗಳು ಸಮೀಪದ ಗ್ರಾಮೀಣ ಪ್ರದೇಶಕ್ಕೆ ಸಂಚಾರಿಸಿವೆ. ಜಿಲ್ಲಾದ್ಯಂತ ಆರು ಘಟಕಗಳಲ್ಲಿನ ಒಟ್ಟು 1200 ಸಿಬ್ಬಂದಿಯಲ್ಲಿ ಮೂರು ನೂರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು, 140 ಖಾಸಗಿ ವಾಹನಗಳು ಜಿಲ್ಲೆಯ ವಿವಿಧಡೆ ಸಂಚರಿಸಿವೆ ಎಂದು ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗೀಯ ಡಿಟಿಒ ಚಾಮರಾಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net