

ಬಳ್ಳಾರಿ: ಬಿಜೆಪಿ ಮುಂಬರುವ ಚುನಾವಣೆಗಳಲ್ಲಿ ಸೋಲುವ ಭೀತಿಯಿಂದಾಗಿ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಹಿಂದುಳಿದ ವರ್ಗಗಳ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲಿಟ್ ಮಾಡಿಸಿದ್ದು, ಇದು ವ್ಯವಸ್ಥಿತವಾಗಿ ಸಂಚಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿರಾಜ್ ಶೇಖ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ವಿಧಾನಸಭಾ ಚುನಾವಣೆ ಪೂರ್ವದಲ್ಲಿಯೇ ಬೆಂಗಳೂರಿನ ಬಿಬಿಎಂಪಿ ಚುನಾವಣೆ ನಡೆಯುತ್ತಿರುವುದರಿಂದ ಅಲ್ಲಿನ ಎಂಟು ಕ್ಷೇತ್ರಗಳಲ್ಲಿ ತಲಾ 8 ರಿಂದ 10 ಸಾವಿರ ಕಾಂಗ್ರೆಸ್ ಮತದಾರರನ್ನು ವ್ಯವಸ್ಥಿತವಾಗಿ ಡಿಲಿಟ್ ಮಾಡಿಸಲಾಗಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಇದೇ ರೀತಿ ಆಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ ಮತದಾರರನ್ನು ಗುರುತಿಸಲು ಕೆಲವರನ್ನು ಪಕ್ಷದಿಂದ ನೇಮಕ ಮಾಡುತ್ತೇವೆ ಎಂದರು.
ಬಹಿರಂಗ ಸಭೆ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪಾದಯಾತ್ರೆ ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾಗಲಿದ್ದು, ರಾಜ್ಯಕ್ಕೆ ಗುಂಡ್ಲಪೇಟೆಯಿಂದ ಪ್ರವೇಶ ಪಡೆಯಲಿದೆ. ಯಾವ ದಿನಾಂಕದಂದು ಆಗಮಿಸಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ರಾಜ್ಯದಲ್ಲಿ 21 ದಿನ ಪಾದಯಾತ್ರೆ ಸಂಚರಿಲಿದೆ. ಪ್ರತಿನಿತ್ಯ 25 ಕಿ.ಮೀ. ಕ್ರಮಿಸಲಿದೆ. ಇದೊಂದು ಸರಳ ಪಾದಾಯಾತ್ರೆಯಾಗಿದ್ದು, 125 ಜನ ರಾಷ್ಟ್ರೀಯ ಮುಖಂಡರು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಬಳ್ಳಾರಿಯಲ್ಲಿ ಮಾತ್ರವೇ ಸಾರ್ವಜನಿಕ ಸಮಾವೇಶ ಏರ್ಪಡಿಸಲಾಗಿದೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನ ಗೆದ್ದರೆ ಮಾತ್ರ ಉಳಿಗಾಲ. ಇಲ್ಲವಾದರೆ ಬಿಜೆಪಿ ಆಪರೇಷನ್‌ಗೆ ಒಳಗಾಗಬೇಕಾಗುತ್ತೆ. 2013ರಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರುವ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳ ಪೈಕಿ ಶೇ.99 ಈಡೇರಿಸಿದ್ದೇವೆ. ಆದರೆ, ಕೆಲವೊಂದು ಕಾರಣಗಳಿಂದಾಗಿ 2018ರಲ್ಲಿ ಪಕ್ಷ ಸೋಲಬೇಕಾಯಿತು ಎಂದರು.
ಪಕ್ಷದ ಬಳ್ಳಾರಿ ಜಿಲ್ಲಾಧ್ಯಕ್ಷ ರಫೀಕ್, ಮೇಯರ್ ರಾಜೇಶ್ವರಿ, ಪ್ರಮುಖರಾದ ಆಂಜನೇಯಲು, ರಮಣ, ಅಲ್ಲಂ ಪ್ರಶಾಂತ್, ಗಾದೆಪ್ಪ, ಮಾರೆಣ್ಣ, ಮಾನಯ್ಯ, ವಿವೇಕ್, ಜಗನ್, ವೆಂಕಟೇಶ್ ಹೆಗಡೆ, ಮುಂಡರಗಿ ನಾಗರಾಜ್, ಎರಕಲಸ್ವಾಮಿ ಇತರರು ಇದ್ದರು.