ಬಳ್ಳಾರಿ : ಕಾಯಕ ಶರಣರ ವಚನಗಳು ಇಂದಿನ ಆಧುನಿಕ ಯುಗಕ್ಕೂ ಪ್ರಸ್ತುತವಾಗಿದ್ದು, ಇಂದಿನ ಯುವ ಪೀಳಿಗೆಯು ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ಇಲ್ಲಿನ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ, ಉರಿಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 12 ನೇ ಶತಮಾನದಲ್ಲಿನ ಶಿವಶರಣರು, ಯಾವುದೇ ಕಾಯಕವೂ ಮೇಲಲ್ಲ ಮತ್ತು ಕೀಳಲ್ಲ ಎಂಬ ಮನೋಧೋರಣೆಯಿಂದ ಕಾಯಕ ಮಾಡಿ ದೇವರನ್ನು ಒಲಿಸಿಕೊಂಡ ಶರಣರು. ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಶರಣರಿದ್ದರು. ಅವರಲ್ಲಿ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಿಪೆದ್ದಿ ಎಂಬ ಐವರು ಕಾಯಕ ಶರಣರು ಪ್ರಮುಖ ಹಿರಿಯ ಶರಣರಾಗಿದ್ದರು ಎಂದರು.
ವಿವಿಧ ಜಿಲ್ಲೆಗಳಲ್ಲಿ ಈ ಕಾಯಕ ಶರಣರ ಮಠಗಳು ಇಂದಿಗೂ ಇವೆ. ಅವರ ಜೀವನ ಹಾಗೂ ಮೌಲ್ಯಗಳನ್ನು ಸಮಾಜಕ್ಕೆ ಬಿತ್ತರಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ ಓದಿನ ಕಡೆ ಗಮನ ಕೊಡಬೇಕು. ಪುಸ್ತಕಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು ಎಂದರು.
ನಿ.ಪ್ರೊ. ಶ್ರೀನಿವಾಸಮೂರ್ತಿ ಮಾತನಾಡಿ, 12ನೇ ಶತಮಾನದಲ್ಲಿ ವಚನಗಳು ಮತ್ತು ಬುದ್ದನ ಕಾಲದಲ್ಲಿ ತ್ರಿಪಿಟಕಗಳೇ ಸಂವಿಧಾನವಾಗಿತ್ತು. ಕಾಯಕ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಕಂದಾಚಾರ, ಜಾತಿ ಪದ್ಧತಿಗಳನ್ನು ಹೋಗಲಾಡಿಸುತ್ತಿದ್ದರು. ಸಮ ಸಮಾಜ ನಿರ್ಮಾಣಕ್ಕಾಗಿ ಶರಣರ ವಚನಗಳನ್ನು ಅಧ್ಯಯನ ಮಾಡುವುದು ಈ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.