ಬಳ್ಳಾರಿ : 12ನೇ ಶತಮಾನದಲ್ಲಿ ಯಾವ ಸಮುದಾಯವೂ ನಮ್ಮವರೆಂದು ಗುರುತಿಸಿಕೊಳ್ಳಲಾಗದ ರೀತಿಯಲ್ಲಿ ನುಲಿಯ ಚಂದಯ್ಯ ಅವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಲಿಡ್ಕರ್ ಅಧ್ಯಕ್ಷ ಮುಂಡರಿಗಿ ನಾಗರಾಜ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜ ಹಾಗೂ ಜನ ಸಾಮಾನ್ಯರ ಏಳಿಗೆಗಾಗಿ ಪರಿತಪಿಸಿದ ವಿವಿಧ ಮಹನೀಯರ ವಿಚಾರಧಾರೆಗಳನ್ನು ನಾವೆಲ್ಲರು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ನಡೆಸಬೇಕು. ಎಲ್ಲರೂ ಸಂಘಟಿತರಾಗಿ ದುಶ್ಚಟಗಳಿಂದ ದೂರವಿದ್ದು, ಸರ್ಕಾರದ ಯೋಜನೆಗಳನ್ನು ಸದುಪಯೋಗಪಡೆದುಕೊಳ್ಳಬೇಕು ಎಂದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಎಲ್.ಗಂಗಾಧರ ಮಾತನಾಡಿ, ನುಲಿಯ ಚಂದಯ್ಯ ಅವರು ಅನುಭವ ಗೋಷ್ಠಿಗಳಲ್ಲಿ ಇವರು ಚಂದೇಶ್ವರ ಲಿಂಗ ಎಂಬ ಅಂಕಿತನಾಮದಲ್ಲಿ ಸುಮಾರು 48 ವಚನ ರಚಿಸಿದ್ದಾರೆ ಎಂದರು.
ವೃತ್ತಿಯಿಂದ ಬಂದಂತಹ ಆದಾಯದಲ್ಲಿ ತಮ್ಮ ಜೀವನಕ್ಕೆ ಅಲ್ಪ ವ್ಯಯಮಾಡಿಕೊಂಡು ಉಳಿದ ಹಣದಲ್ಲಿ ಜಂಗಮರ ದಾಸೋಹಕ್ಕಾಗಿ ಮೀಸಲಿಟ್ಟಿದ್ದು, ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಸಾಂಸ್ಕ್ರತಿಕ ಕಲಾತಂಡಗಳು ಗಮನ ಸೆಳೆದವು.