ಆಹಾರ ಸಿಗದೇ ಮೃತಪಟ್ಟ ಸೋಂಕಿತ ವೃದ್ಧ; ಕಾಡಿ, ಬೇಡಿದರೂ ಸಹಾಯಕ್ಕೆ ಬರಲಿಲ್ಲ

18082020 Bellary corona old man death
Published on

ಬಳ್ಳಾರಿ: ಚಿಕಿತ್ಸೆ ಮತ್ತು ಆಹಾರ ದೊರಕದೆ ಕರೊನಾ ಸೋಂಕಿತ 60 ವರ್ಷದ ವೃದ್ಧನೊಬ್ಬ ತಾಲೂಕಿನ ಟಿ.ಬೆಳಗಲ್ಲು ಗ್ರಾಮದಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ. ಸಾಯುವ ಕೊನೆಗಳಿಗೆಯಲ್ಲಿ ಪಡಬಾರದ ಕಷ್ಟ ಪಟ್ಟಿದ್ದು ಮನಕಲಕುವಂತಿದೆ. ಸಹಾಯಕ್ಕೆ ಯಾರೂ ಧಾವಿಸದ ಪರಿಣಾಮ ಪ್ರಾಣ ಬಿಟ್ಟಿದ್ದಾನೆ.

ಕೊಟ್ಟೂರು ಪಟ್ಟಣದಲ್ಲಿ ಸಮಾರಂಭವೊಂದನ್ನು ಮುಗಿಸಿ, ಬಸ್ ಮೂಲಕ ಬಂದಿದ್ದ ವೃದ್ಧನಿಗೆ ಆ.14ರಂದು ಪರೀಕ್ಷೆ ಮಾಡಿಸಿದಾಗ ಬಳಿಕ ಸೋಂಕು ದೃಢವಾಗಿತ್ತು. ಈ ವೇಳೆ ಮಕ್ಕಳು, ಸಂಬಂಧಿಕರು ವೃದ್ಧನನ್ನು ಒಬ್ಬಂಟಿಯಾಗಿ ಬಿಟ್ಟು ಮನೆ ಖಾಲಿ ಮಾಡಿದ್ದಾರೆ. ವೃದ್ಧನ ಒಪ್ಪಿಗೆಯಂತೆ ಆರೋಗ್ಯ ಸಿಬ್ಬಂದಿಯು ಅವರನ್ನು ಹೋಂ ಐಸೋಲೇಷನ್‌ನಲ್ಲಿಯೆ ಬಿಟ್ಟಿದ್ದಾರೆ. ಬಳಿಕ ಉಸಿರಾಟದಲ್ಲಿ ತೊಂದರೆಯಾಗಿದೆ. ವೈದ್ಯ, ಪಿಡಿಒಗೆ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ‘ನನಗೆ ಊಟವೂ ಇಲ್ಲ, ಉಸಿರಾಡುವುದಕ್ಕೂ ಸಮಸ್ಯೆಯಾಗುತ್ತಿದೆ’ ಎಂದಾಗ ‘ನಮ್ಮಲ್ಲಿ ಬೆಡ್‌ಗಳ ಕೊರತೆಯಿದೆ’ ಎಂದು ವೈದ್ಯರು ಹೇಳಿದ್ದಾರೆ. ಆಗೊಮ್ಮೆ ಈಗೊಮ್ಮೆ ಮಾತ್ರ ವೃದ್ಧನ ಮಗ ಊಟ ತಂದಿದ್ದಾನೆ. ಅದು ಖಾಲಿಯಾದಾಗ ಉಪವಾಸವಿದ್ದಾನೆ. ಇದರಿಂದ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಹಾಯಕ್ಕೆ ನೆರೆಯವರನ್ನು ಕರೆದರೂ ಪ್ರಯೋಜನವಾಗಿಲ್ಲ. ಸಂಬಂಧಿಕರೂ ಸಹ ಕರೆಗೆ ಸ್ಪಂದಿಸಿಲ್ಲ. ಕೊನೆಗೆ ಆಹಾರ ಸಿಗದೆ ವೃದ್ಧ ಪ್ರಾಣಬಿಟ್ಟಿದ್ದಾನೆ ಎಂದು ದೂರದ ಸಂಬಂಧಿ ತಿಳಿಸಿದ್ದಾರೆ.

ವೃದ್ಧನೇ ಹೋಂ ಐಸೋಲೇಷನನಲ್ಲಿ ಇರುವುದಾಗಿ ತಿಳಿಸಿದ್ದರು. ನಂತರ ಉಸಿರಾಟದಲ್ಲಿ ಸಮಸ್ಯೆಯಾಗಿ ಮೃತಪಟ್ಟಿದ್ದಾರೆ. ನಮ್ಮಲ್ಲಿ ಬೆಡ್‌ಗಳ ಕೊರತೆಯಿಲ್ಲ. | ಎಸ್.ಎಸ್.ನಕುಲ್, ಡಿಸಿ, ಬಳ್ಳಾರಿ.

ವೃದ್ಧನಿಗೆ ಸಕಾಲಕ್ಕೆ ಆಹಾರ ದೊರೆತಿಲ್ಲ. ಕೊನೆಗಳಿಗೆಯಲ್ಲಿ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟಿದ್ದಾರೆ. ಅವರು ಚಿಕಿತ್ಸೆಗಾಗಿ ವೈದ್ಯರಿಗೆ ಕರೆ ಮಾಡಿರುವ ಕುರಿತಾಗಿ ಅವರ ಮೊಬೈಲ್ ಪರಿಶೀಲಿಸಲಾಗುವುದು.| ಡಾ.ಎಚ್.ಎಲ್.ಜನಾರ್ದನ್, ಡಿಎಚ್‌ಒ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net