ಬಳ್ಳಾರಿ ; ಕನ್ನಡಿಗರ ವಿರುದ್ಧ ನಡೆಯುತ್ತಿರುವ ಮರಾಠಿಗರ ಪುಂಡಾಟಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇ ಗೌಡ ಬಣ) ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಮಾತನಾಡಿ, ಎಂಇಎಸ್ ಪುಂಡರ ವಿರುದ್ಧ ನಾವು ನಿರಂತರ ಹೋರಾಟ ಮಾಡುತ್ತೇವೆ. ಬೆಳಗಾವಿಯಲ್ಲಿ ಕನ್ನಡಿಗರ ಮೇಲಿನ ದಬ್ಬಾಳಿಕೆ ಮಾಡುತ್ತಿರುವ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ನೆಲ, ಜಲ, ಬಾಷೆ ಅಂತಾ ಬಂದಾಗ ರಾಜಕೀಯ ಮಾಡಬಾರದು. ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಮಹದಾಯಿ, ಕಳಶ ಬಂಡೂರಿ ಮತ್ತು ಮೇಕೆದಾಟು ನೀರಾವರಿ ಯೋಜನೆಯನ್ನು ಶೀಘ್ರವಾಗಿ ಆರಂಭಿಸಿ, ರಾಜ್ಯದ ಜನರಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಣಿಗೆ ನೀರು ಒದಗಿಸಬೇಕು. ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನ ಕರ್ನಾಟಕ ರಾಜ್ಯಕ್ಕೆ ಇದೆ. ಆದರೆ ನಮ್ಮ ರಾಜ್ಯ ಸಿಗಬೇಕಾದ ಜಿಎಸ್‌ಟಿ ಹಣದ ಪಾಲನ್ನು ಕೇಂದ್ರ ಸರ್ಕಾರ ಪ್ರತಿ ವರ್ಷ ತಪ್ಪದೇ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಸಂಪನ್ಮೂಲ ಬಳಸಿಕೊಂಡು ಸ್ಥಾಪಿತವಾಗಿರುವ ಕೈಗಾರಿಕೆ, ಕಾರ್ಖಾನೆ, ಐಟಿಬಿಟಿ, ಮೆಟ್ರೋ ರೈಲ್ವೆಗಳಲ್ಲಿನ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಬಳ್ಳಾರಿಯ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಶೇ.80%ರಷ್ಟು ಹುದ್ದೆಗಳನ್ನು ನೀಡಬೇಕು ಎಂದು ತಿಳಿಸಿದರು.
ಕನ್ನಡಪರ ಸಂಘಟನೆಗಳಿಂದ ಬೈಕ್ ರ‌್ಯಾಲಿ: ಮರಾಠಿಗರ ಪುಂಡಾಟಿಕೆ ಖಂಡಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡಪರ ಸಂಘಟನೆಗಳು ಬೈಕ್ ರ‌್ಯಾಲಿ ನಡೆಸಿದರು. ಬಳಿಕ ರಾಯಲ್ ವೃತ್ತದಲ್ಲಿ ಎಂಇಎಸ್ ಬ್ಯಾನರ್‌ಗೆ ಚಪ್ಪಲಿಯಲ್ಲಿ ಹೊಡೆದು, ಎಂಇಎಸ್ ರಾಕ್ಷಸ ಎನ್ನುವ ಬ್ಯಾನರ್‌ಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು.
ನಗರದ ಮೋತಿ ವೃತ್ತ, ಎಸ್ಪಿ ವೃತ್ತ, ಸಂಗಂ ವೃತ್ತ, ಕನಕದುರ್ಗಮ್ಮ ವೃತ್ತ, ಎಂ.ಜಿ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಜನಜೀವನ ಯಥಾಸ್ಥಿತಿಯಲ್ಲಿತ್ತು. ಬೆಂಗಳೂರು ರಸ್ತೆಯಲ್ಲಿ ಬಹುತೇಕ ವಾಣಿಜ್ಯ ಮಳಿಗೆಗಳು ಅಂಗಡಿ ತೆರೆದಿದ್ದವು. ಬಸ್, ಅಟೋ ಸೇರಿ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು.ದೊಡ್ಡ ಮಾರುಕಟ್ಟೆ, ಸಣ್ಣ ಮಾರುಕಟ್ಟೆ ಸೇರಿ ಇತರೆ ವ್ಯಾಪಾರ ವಹಿವಾಟುಗಳು ಎಂದಿನಂತೆ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
ಹೊಸ ಬಸ್ ನಿಲ್ಡಾಣ, ಹಳೆ ಬಸ್ ನಿಲ್ಡಾಣ, ಸಿಟಿ ಬಸ್ ನಿಲ್ಡಾಣ, ರೈಲ್ವೆ ನಿಲ್ಡಾಣ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗಲ್ಲಿಲ್ಲ. ನಗರದ ಹೃದಯ ಭಾಗವಾಗಿರುವ ರಾಯಲ್ ವೃತ್ತದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಒಂದೆರಡು ಪೊಲೀಸ್ ವಾಹನಗಳ ನಿಯೋಜಿಸಿ, ನಿಗಾ ವಹಿಸಲಾಗಿತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಭದ್ರತಾ ಹಿತದೃಷ್ಠಿಯಿಂದ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.