ಬಳ್ಳಾರಿ : ಕನ್ನಡ ಕಥಾ ಕಣಜ ಅತ್ಯಂತ ಸಮೃದ್ಧವಾದದ್ದು. ಕಥೆಗಾರರಲ್ಲಿ ಕತೆ ಹುಟ್ಟುವ, ಜೀವ ಪಡೆಯುವ, ಓದುಗರಿಗೆ ಮಿಡಿಯುವಂತೆ ಮಾಡುವ ಪರಿಯೇ ಸೋಜಿಗವಾದುದು ಎಂದು ಲೇಖಕ ಸಿದ್ದರಾಮ ಕಲ್ಮಠ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಹಾಗೂ ಅವ್ವ ಪುಸ್ತಕಾಲಯ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ‘ಹೊಸ ಓದು’ ಸಂವಾದ ದ ರವೀಂದ್ರ ಮುದ್ದಿ ಅವರ ‘ ಸಿಗ್ನಲ್ ಜಂಪ್ ‘ ಕಥಾ ಸಂಕಲನದಲ್ಲಿ ಮಾತನಾಡಿದರು. ಈ ಸಂಕಲನದ ಬಹುಪಾಲು ಪಾತ್ರಗಳು ವ್ಯವಸ್ಥೆಯ ವಿರುದ್ಧ ಪ್ರತಿರೋಧವನ್ನು ಒಡ್ಡುತ್ತವೆ. ನ್ಯಾಯವನ್ನು ಪಡೆಯುವುದರ ಜತೆಯಲ್ಲಿ ಲೋಕಾನುಭವ, ಬದುಕಿನ ಚಲನಶೀಲತೆ, ಸಶಕ್ತ ಭಾಷೆಯ ಬಳಕೆಯಿಂದ ಕಥೆಗಳನ್ನು ನಿರ್ವಹಿಸಿದ ರೀತಿ ಸೆಳೆಯುತ್ತದೆ ಎಂದರು.
ಪತ್ರಕರ್ತ ಕೆ.ಎಂ. ಮಂಜುನಾಥ ಮಾತನಾಡಿ, ನಿತ್ಯದ ತಲ್ಲಣ, ಸಂಬಂಧಗಳ ವಿಘಟನೆ, ಸಾಮಾಜಿಕ ಪ್ರಜ್ಞೆ, ಕುತೂಹಲವನ್ನು ಹುಟ್ಟಿಸುವ ಗುಣ, ಸೂಕ್ಷ್ಮ ಗ್ರಹಿಕೆಯಿಂದಾಗಿ ಇಲ್ಲಿನ ಕಥೆಗಳಿಗೆ ತೀವ್ರವಾಗಿ ತಾಕುವ ಶಕ್ತಿಯಿದೆ. ಪ್ರಧಾನವಾಗಿ ಇಲ್ಲಿನ ಬಹುಪಾಲು ಕಥೆಗಳು ಸುಖಾಂತ ಮತ್ತು ದುಃಖಾಂತದಿಂದ ಕೊನೆಗೊಳ್ಳುತ್ತವೆ. ಯಾವುದೇ ಕಥೆ ಓದುಗರನ್ನು ಕಲಕದೆ ಇದ್ದರೆ, ಭಾವನೆಗಳನ್ನು ಅರಳಿಸದೇ ಇದ್ದರೆ ಸಾರ್ಥಕವಾಗುವುದಿಲ್ಲ. ನಮ್ಮ ನಡುವೆ ನಡೆಯುವ ಘಟನೆಗಳಿಗೆ ಕಥೆಗಾರ ಇಲ್ಲಿ ಮುಖಾಮುಖಿಯಾಗುತ್ತಲೇ ಸೃಜನಶೀಲ ಶಕ್ತಿಯನ್ನು ಮೆರೆದಿರುವುದು ಧನಾತ್ಮಕ ಅಂಶ ಎಂದು ಬಣ್ಣಿಸಿದರು.
ಮಕ್ಕಳ ಸಾಹಿತಿ ಡಾ. ಶಿವಲಿಂಗಪ್ಪ ಹಂದಿಹಾಳು ಮಾತನಾಡಿ, ಭಿನ್ನ ವೃತ್ತಿಯ, ಭಿನ್ನ ಅಭಿರುಚಿಯ ಲೇಖಕರ ಅನುಭವಗಳನ್ನು ಪರಿಚಯಿಸುವ, ಅವರ ಕೃತಿಗಳೊಂದಿಗೆ ಅನನ್ಯವಾಗಿ ಸಂವಾದಿಸುವ ಒತ್ತಾಸೆ ಹೊಸ ಓದು ಕಾರ್ಯಕ್ರಮದ್ದಾಗಿದೆ ಎಂದರು.