

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಬುಧವಾರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಶಕ್ತಿ ಪ್ರದರ್ಶನ ನಡೆಯಿತು. ಮಾಜಿ ಸಚಿವ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅನುಪಸ್ಥಿತಿಯಲ್ಲಿ ಅವರ ಪತ್ನಿ ಲಕ್ಷ್ಮೀ ಅರುಣಾ ನೇತೃತ್ವದಲ್ಲಿ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ನೂರಾರು ಕಾರ್ಯಕರ್ತರು ಕೆಆರ್‌ಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಗಮನ ಸೆಳೆದರು.
ಡಿ.25ರಂದು ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ ಬೆನ್ನಲ್ಲೇ ಬಳ್ಳಾರಿ ಸೇರಿದಂತೆ ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೋಲಾರ, ಚಿಕ್ಕಬಳ್ಳಾಪುರ ಹೀಗೆ ಬೇರೆ ಜಿಲ್ಲೆಗಳಿಂದ ಜನಾರ್ದನ ರೆಡ್ಡಿ ಅವರಿಗೆ ಬೆಂಬಲ ವ್ಯಕ್ತವಾಗುತ್ತಿದ್ದು, 56ನೇ ಜನ್ಮದಿನದ ನಿಮಿತ್ತ ತವರು ಜಿಲ್ಲೆ ಬಳ್ಳಾರಿ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ, ಕಾಂಗ್ರೆಸ್ ತೊರೆದು ಕೆಆರ್‌ಪಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಲಕ್ಷ್ಮೀ ಅರುಣಾ ಮಾತನಾಡಿ, ಜನಾರ್ದನ ರೆಡ್ಡಿ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಅವರನ್ನು ಬಳ್ಳಾರಿಗೆ ಬಾರದಂತೆ ಜೈಲಿಗೆ ಕಳುಹಿಸಿದರು. ಈಗ ಜೈಲುವಾಸ ಮುಗಿಸಿಕೊಂಡು ಜನರ ಸೇವೆಯತ್ತ ಗಮನ ನೀಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ರಾಜಕೀಯಕ್ಕೆ ಬರಬೇಕಿದೆ ಎಂದರು.
ಅಖಾಡಕ್ಕಿಳಿದ ರೆಡ್ಡಿ ಮಗಳು ಬ್ರಾಹ್ಮಣಿ: ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಜನಾರ್ದನ ರೆಡ್ಡಿ ಮಗಳು ಬ್ರಾಹ್ಮಣಿ ರಾಜೀವ್ ರೆಡ್ಡಿ ಅವರು ತಂದೆ ಕಟ್ಟಿರುವ ಕೆಆರ್‌ಪಿ ಪಕ್ಷವನ್ನು ಬೆಂಬಲಿಸಿ ದಿಕ್ಸೂಚಿಯ ಭಾಷಣ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಜನಾರ್ದನ ರೆಡ್ಡಿ ಅವರೆ ಕಟ್ಟಿದ ಸಾಮ್ರಾಜ್ಯದಿಂದ ಅವರು ದೂರ ಉಳಿಯುವಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಯಿತು. ವಿಧಿಯಾಟ ಅವರ ಜನ್ಮಭೂಮಿ, ಕರ್ಮ ಭೂಮಿ, ಪುಣ್ಯ ಭೂಮಿಯಿಂದ ದೂರ ಆಗಬೇಕಾದ ಸ್ಥಿತಿ ಬೇರೆಯರಿಗೆ ಬಾರದಿರಲಿ. ಜಿಲ್ಲೆಯಲ್ಲಿ ಅವರು ಸಚಿವರಾಗಿ ಮಾಡಿದ ಕೆಲಸಗಳು ಸ್ಮರಣೀಯ. ನಂತರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಮತ್ತೊಮ್ಮೆ ಅವರನ್ನು ರಾಜಕೀಯಕ್ಕೆ ತರಬೇಕಿದೆ. ಅದು ಜನರ ಕೈಯಲ್ಲಿದೆ ಎಂದರು.
ಕಾಂಗ್ರೆಸ್, ಬಿಜೆಪಿಯಿಂದ ಸೇರ್ಪಡೆ: ಸಿರಗುಪ್ಪದ ಪ್ರಮುಖ ಟಿಕೆಟ್ ಆಕಾಂಕ್ಷಿ ಧರಪ್ಪನಾಯಕ, ಹಗರಿಬೊಮ್ಮನಹಳ್ಳಿಯ ಕೆ.ಪ್ರಸನ್ನಕುಮಾರ್ ಸೇರಿದಂತೆ ಜಿಲ್ಲೆಯ 126 ಗ್ರಾಪಂ ಮಾಜಿ ಸದಸ್ಯರು, 21 ತಾಪಂ ಮಾಜಿ ಸದಸ್ಯರು ಹಾಗೂ 14 ಜಿಪಂ ಮಾಜಿ ಸದಸ್ಯರು ಕೆಆರ್‌ಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಧರಪ್ಪ ನಾಯಕ ಮಾತನಾಡಿ, ಸ್ವಾತಂತ್ರೃ ಬಂದು ಏಳು ದಶಕಗಳು ಕಳೆದರೂ ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಆಗಿರಲಿಲ್ಲ. 2008ರಲ್ಲಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಜನಾರ್ದನ ರೆಡ್ಡಿ ನಂತರದಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಯಿತು ಎಂದರು.
ಇದೇ ವೇಳೆ ವಿಡಿಯೋ ಸಂದೇಶದ ಮೂಲಕ ಜನಾರ್ದನ ರೆಡ್ಡಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಬೆಂಗಳೂರು ಮಹಾನಗರದ ನಂತರ ರಾಜ್ಯದಲ್ಲಿ ಎರಡನೇ ಮಹಾನಗರವಾಗಿ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ಕನಸುಗಳನ್ನು ಸಭೆಯಲ್ಲಿ ತಿಳಿಸಿದರು. ರೆಡ್ಡಿ ಅವರ 56ನೇ ಹುಟ್ಟುಹಬ್ಬದ ಅಂಗವಾಗಿ 56 ಕೆಜಿ ಯ ಕೇಕ್ ಕತ್ತರಿಸಿ ಕಾರ್ಯಕರ್ತರು ಸಂಭ್ರಮಿಸಿದರು.