ಬಳ್ಳಾರಿ ವೀಕ್ಷಣಾಲಯದಲ್ಲಿದ್ದ ಬಾಲಕನ ಸಾವು ಅನುಮಾನಾಸ್ಪದ, ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ

15062020 Bellary boy death
Published on

ಬಳ್ಳಾರಿ: ಇಲ್ಲಿನ ದೇವಿನಗರದ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ವೀಕ್ಷಣಾಲಯದಲ್ಲಿದ್ದ 16 ವರ್ಷದ ಬಾಲಕ ಭಾನುವಾರ ಸಂಜೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಕೊಪ್ಪಳ ಜಿಲ್ಲೆ ಕಾರಟಗಿ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಾಲಕನನ್ನು ಶನಿವಾರ ಮಧ್ಯರಾತ್ರಿ ನಗರದ ವೀಕ್ಷಣಾಲಯಕ್ಕೆ ತರಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಇಲಾಖೆ ಉಪ ನಿರ್ದೇಶಕ ನಾಗರಾಜ, ಘಟನೆ ನಡೆದಾಗ ವೀಕ್ಷಣಾಲಯದಲ್ಲಿ ರಕ್ಷಣಾ ಸಿಬ್ಬಂದಿ ಮಾತ್ರ ಇದ್ದರು.

ಥಳಿಸಿರುವ ಹಿನ್ನೆಲೆಯಲ್ಲಿ ಬಾಲಕ ಮೃತಪಟ್ಟಿರುವ ಶಂಕೆಯಿದೆ. ಭಾನುವಾರ ಸಂಜೆ ವಿಮ್ಸ್‌ಗೆ ಕರೆದೊಯ್ದಗ ಮೃತಪಟ್ಟಿರುವ ವಿಷಯ ತಿಳಿದಿದೆ. ಠಾಣೆಯಲ್ಲಿ ದೂರು ನೀಡಲಾಗಿದೆ. ಇಲಾಖೆ ನಿರ್ದೇಶಕಗೆ ವರದಿ ಸಲ್ಲಿಸಿದ್ದೇವೆ ಎಂದರು. ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಕೌಲ್ ಬಜಾರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಯಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮಕ್ಕಳ ರಕ್ಷಣಾ ಘಟಕದ ನಿರ್ದೇಶನಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮಕೈಗೊಳ್ಳಲಿವೆ. | ಎಚ್.ಸಿ.ರಾಘವೇಂದ್ರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net