ಬಳ್ಳಾರಿ ; ಜಿಲ್ಲೆಯ ಜೀನ್ಸ್ ಕಾರ್ಮಿಕರು ಜಾಗೃತರಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾ. ರಾಜೇಶ್ ಎನ್.ಹೊಸಮನೆ ಹೇಳಿದರು.
ನಗರದ ಬಿಡಿಎಸ್ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೀನ್ಸ್ ಗಾರ್ಮೆಂಟ್ ಕಮ್ಯೂನಿಟಿ ಡೆವೆಲಪ್‌ಮೆಂಟ್ ಅಸೋಸಿಯೇಷನ್, ರೀಚ್ ಸಂಸ್ಥೆ, ಕಾನೂನು ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಮಕ್ಕಳ ಮತ್ತು ರಕ್ಷಣಾ ಘಟಕ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮಾನವಾಗಿ ದುಡಿಯುತ್ತಿದ್ದಾರೆ. ಮಹಿಳೆ ಕಾರ್ಮಿಕರು ಮಾನಸಿಕವಾಗಿ ಹೆಚ್ಚು ಸದೃಢರಾಗಿದ್ದು, ಬಲಿಷ್ಠರಾಗುವ ಮೂಲಕ ಅಸಂಘಟಿತ ವಲಯದಲ್ಲಿನ ಮಹಿಳಾ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರ ಮಾತನಾಡಿ, ಕಾರ್ಮಿಕ ಇಲಾಖೆಯು ಅಸಂಘಟಿತ ವಲಯದಲ್ಲಿ ದುಡಿಯುವವರಿಗಾಗಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಿದೆ. ನೋಂದಣಿಯಾಗುವ ಕಾರ್ಮಿಕರಿಗೆ ಇಲಾಖೆಯು ಹಲವಾರು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡುತ್ತದೆ ಎಂದರು.
ಬಳಿಕ ಗಾರ್ಮೆಂಟ್ ಮಹಿಳಾ ಕಾರ್ಮಿಕರಿಗೆ ಇಲಾಖೆಯಿಂದ ನೊಂದಣಿಯಾದವರಿಗೆ ಟೈಲರಿಂಗ್ ಕಾರ್ಡ್ ವಿತರಿಸಲಾಯಿತು.