ಬಳ್ಳಾರಿ : ಗಣಿನಾಡು ಜೀನ್ಸ್‌ಗೆ ದೇಶ ಹಾಗೂ ವಿದೇಶ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಕೆಲ ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ನಲುಗುತ್ತಿರುವ ಜೀನ್ಸ್‌ಗೆ ಪರಿಸರ ಮಾಲಿನ್ಯ ಇಲಾಖೆ ನೋಟಿಸ್ ಜಾರಿ ಮಾಡಿ ಬಿಸಿ ಮುಟ್ಟಿಸಿದೆ.
ನಗರದ ಹೊರವಲಯದ ಮುಂಡ್ರಗಿ ಪ್ರದೇಶದಲ್ಲಿ ನಾಲವತ್ತಕ್ಕೂ ಅಧಿಕ ಜೀನ್ಸ್ ವಾಷಿಂಗ್ ಘಟಕಗಳಿಗೆ ಅಪಾರ ಪ್ರಮಾಣದ ನೀರಿನ ಅವಶ್ಯಕತೆಯಿದೆ. ಆದ್ದರಿಂದ, ಪ್ರತಿಯೊಂದು ಘಟಕಗಳಿಗೆ ಪೈಪ್‌ಲೈನ್ ಮೂಲಕ ಬೋರೆವೆಲ್ ಅಳವಡಿಸಿಕೊಂಡು ನೀರು ಸರಬಾರಜು ಮಾಡಿಕೊಳ್ಳಲಾಗುತ್ತಿದೆ. ನಿತ್ಯ ಒಂದು ಜೀನ್ಸ್ ಘಟಕದಿಂದ ಲಕ್ಷಾಂತರ ಲೀ. ನೀರು ವಾಷಿಂಗ್‌ಗೆ ಬಳಸಲಾಗುತ್ತಿದೆ. ಆದರೆ, ವಾಷಿಂಗ್‌ಗೆ ಬಳಸಿದ ನೀರನ್ನು ಶುದ್ಧಿಕರಿಸಿದೆ ಹೊರಗೆ ಬಿಡುವುದರಿಂದ ಸುತ್ತಲಿನ ಪರಿಸರ ಹಾಗೂ ಜನರ ಆರೋಗ್ಯ ಹಾಳಾಗಲಿದೆ. ಇದರ ಬಗ್ಗೆ ಹಲವು ಬಾರಿ ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿಗಳು ಜೀನ್ಸ್ ಘಟಕದ ಮಾಲೀಕರಿಗೆ ಸೂಚಿಸಿದರೂ ಯಾವುದೇ ಕ್ರಮವಹಿಸಿಲ್ಲ. ಇತ್ತೀಚೆಗೆ ಜಿಲ್ಲೆಗೆ ಉಪಲೋಕಾಯುಕ್ತ ಭೇಟಿ ನೀಡಿದ ವೇಳೆ ಜೀನ್ಸ್ ಘಟಕಗಳಿಂದ ನೀರು ಶುದ್ಧಿಕರಿಸದೆ ಹೊರ ಬಿಡುವುದನ್ನು ಕಂಡು ಇಲಾಖೆಯ ಅಧಿಕಾರಿಗಳ ಮೇಲೆ ನೋಟಿಸ್ ಜಾರಿ ಮಾಡಿ ಅಸಮಾಧಾನ ಹೊರಹಾಕಿದ್ದರು.
ನೋಟಿಸ್ ಜಾರಿ : ಜಿಲ್ಲೆಯಲ್ಲಿ ಕರೊನಾಕ್ಕೂ ಮುನ್ನ 86 ಜೀನ್ಸ್ ವಾಷಿಂಗ್ ಘಟಕಗಳು ಚಾಲ್ತಿಯಲ್ಲಿದ್ದವು. ನಂತರ ಕರೊನಾ ಹೊಡೆತಕ್ಕೆ ವಿವಿಧ ಸಮಸ್ಯೆಗಳಿಂದ ಏಕಾಏಕಿ ಕೆಲ ಘಟಕಗಳು ಬಂದ್ ಆದವು. ಸದ್ಯ 48 ವಾಷಿಂಗ್ ಘಟಕಗಳಿದ್ದು ಚಾಲ್ತಿಯಲ್ಲಿದ್ದು ಈಗ ಎಲ್ಲ ಘಟಕಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೆಲ ದಿನದ ಹಿಂದಯೇ ಘಟಕಗಳ ಮಾಲೀಕರು ಬೆಂಗಳೂರಿನಲ್ಲಿ ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸದ್ಯಕ್ಕೆ ಪ್ರತಿಯೊಂದು ಜೀನ್ಸ್ ಘಟಕದಲ್ಲಿ ಸ್ವಂತ ತ್ಯಾಜ್ಯ ನಿರ್ವಹಣಾ ಬಳಸಿಕೊಂಡು ನೀರು ಶುದ್ಧಿಕರಿಸಿ ಹೊರ ಹರಿಸಬೇಕು ಎಂದು ಸೂಚಿಸಲಾಗಿದೆ.
ಸಾಮೂಹಿಕ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ : ಜಿಲ್ಲೆಯ ಜೀನ್ಸ್ ಘಟಕಗಳ ಅನುಕೂಲಕ್ಕಾಗಿ ಸರ್ಕಾರ ಹಾಗೂ ಜೀನ್ಸ್ ಮಾಲೀಕರ ಸಹಕಾರದೊಂದಿಗೆ ಮುಂಡ್ರಗಿ ಬಳಿಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸಾಮೂಹಿಕ ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಜೀನ್ಸ್ ಮಾಲೀಕರು ಅರ್ಧದಷ್ಟು ಅನುದಾನ ವ್ಯಯಿಸಬೇಕು ಎಂದು ತಿಳಿಸಲಾಗಿದೆ. ಇದರಿಂದ ಶಾಶ್ವತವಾಗಿ ಜೀನ್ಸ್ ಘಟಕಗಳಿಗೆ ಪರಿಹಾರ ಸಿಗಲಿದೆ. ಇನ್ನೂ ಎರಡ್ಮೂರು ತಿಂಗಳಲ್ಲಿ ಸಾಮೂಹಿಕ ತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜೀನ್ಸ್ ಮಾಲೀಕರೊಬ್ಬರು ತಿಳಿಸಿದರು.
ವೇದವತಿ ನದಿಗೆ ವಾಷಿಂಗ್ ನೀರು : ಮುಂಡ್ರಗಿ ಪ್ರದೇಶದ ಜೀನ್ಸ್ ಘಟಕಗಳಿಂದ ಹೊರ ಹರಿಸುವ ನೀರು ಅಂದ್ರಾಳ್ ಬಳಿಯ ಹಳ್ಳದ ಮೂಲಕ ವೇದಾವತಿ ನದಿಗೆ ನೀರು ಸೇರಲಿದೆ. ನದಿಯ ನೀರನ್ನು ನಂಬಿ ಲಕ್ಷಾಂತರ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದು ಫಲವತ್ತತೆಯ ಕೃಷಿ ಭೂಮಿ ಹಾಳಾಗಲಿದ್ದು, ಜನರ ಹಾಗೂ ಜಾನಾವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬ ಭಯ ರೈತರಲ್ಲಿದೆ. ಆದ್ದರಿಂದ, ಕೂಡಲೇ ಸಾಮೂಹಿಕ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಿ ನೀರು ಶುದ್ಧಿಕರಿಸಿ ಹೊರ ಹರಿಸಬೇಕು ಎಂದು ರೈತರ ಒತ್ತಾಯವಾಗಿದೆ.
ಕೋಟ್... ಜಿಲ್ಲೆಯ ಜೀನ್ಸ್ ಘಟಕಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಾಲೀಕರೊಂದಿಗೆ ಸಭೆ ಕರೆದು ಸದ್ಯಕ್ಕೆ ಸ್ವಂತದ ತ್ಯಾಜ್ಯದ ನಿರ್ವಹಣಾ ಬಳಸಿಕೊಂಡು ನೀರು ಶುದ್ಧಿಕರಿಸಿ ಎಂದು ಸೂಚಿಸಲಾಗಿದೆ.
- ಸಿದ್ದೇಶ್ವರ ಬಾಬು, ಜಿಲ್ಲಾ ಅಧಿಕಾರಿ, ಪರಿಸರ ಮಾಲಿನ್ಯ ಇಲಾಖೆ, ಬಳ್ಳಾರಿ.
ಕೋಟ್.. ನೀರು ಶುದ್ದಿಕರಿಸದೆ ಹೊರ ಹರಿಸುವದರ ಬಗ್ಗೆ 48 ಜೀನ್ಸ್ ಘಟಕಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಸಂಬಂಧಪಟ್ಟ ಮೇಲಧಿಕಾರಿಗಳೊಂದಿಗೆ ಚರ್ಚಿಸಿದ್ದ ಸಾಮೂಹಿಕ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇನ್ನೂ ಎರಡ್ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗಬಹುದು.
- ಜಿ.ಮಲ್ಲಿಕಾರ್ಜುನ ಗೌಡ, ಕಾರ್ಯದರ್ಶಿ, ಜೀನ್ಸ್ ವಾಷಿಂಗ್ ಘಟಕ, ಬಳ್ಳಾರಿ.