ಬಳ್ಳಾರಿ : ಜಿಲ್ಲೆಯ ಜೀನ್ಸ್ ಉದ್ಯಮ ವರ್ಷದಿಂದ ವರ್ಷಕ್ಕೆ ನಲುಗುತ್ತಿದೆ. ಇದರ ನಡುವೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಿಕೊಳ್ಳಲು ಕೆಲ ಉದ್ಯಮಿಗಳು ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗಿವೆ.
ಇಲ್ಲಿನ ಮುಂಡ್ರಗಿಯ ಕೈಗಾರಿಕಾ ಪ್ರದೇಶದ ಮೂರನೇ ಹಂತದಲ್ಲಿ ಅಂದಾಜು 63ಕ್ಕೂ ಹೆಚ್ಚು ವಾಷಿಂಗ್ ಘಟಕಗಳಿವೆ. ಕಳೆದ ತಿಂಗಳಿಂದ ನೀರಿನ ಕೊರತೆ ಸೇರಿ ಹಲವಾರು ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಬಹುತೇಕ ಘಟಕಗಳು ಮುಚ್ಚಿವೆ. ಸದ್ಯ ಕೇವಲ 20 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಜೀನ್ಸ್ ವಾಷಿಂಗ್ ಘಟಕಗಳಿಗೆ ದಿನಕ್ಕೆ ಸರಿ ಸುಮಾರು ಒಂದು ಲಕ್ಷ ಲೀ. ಹೆಚ್ಚು ಪ್ರಮಾಣದ ನೀರು ಅಗತ್ಯವಿದೆ. ಪ್ರತಿ ಘಟಕದಲ್ಲಿಯೂ ಕನಿಷ್ಠ ಐದರಿಂದ ಆರು ಜೀನ್ಸ್ ವಾಷಿಂಗ್ (ಕಲರ್ ಡೈಯಿಂಗ್ ಮಾಡುವ)ಯಂತ್ರಗಳಿವೆ. ಒಂದು ಯಂತ್ರಕ್ಕೆ ಒಂದು ಲಾಟ್ ಜೀನ್ಸ್ ಪ್ಯಾಂಟ್ ವಾಷಿಂಗ್ ಮಾಡಲು ಹದಿನೈದು ನೂರು ಲೀ. ನೀರು ಬೇಕು. ಹೀಗೆ ಒಂದು ಯಂತ್ರ ದಿನಕ್ಕೆ ನಾಲ್ಕು ಲಾಟ್ ಪ್ಯಾಂಟ್‌ಗಳನ್ನು ವಾಷಿಂಗ್ ಮಾಡಲಿದ್ದು, ಆರು ಯಂತ್ರಗಳಿಗೆ ದಿನಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಲೀ. ನೀರು ಬೇಕಿದೆ. ಮಾರ್ಚ್ ತಿಂಗಳವರೆಗೂ ಘಟಕದಲ್ಲಿನ ಬೋರ್‌ವೆಲ್‌ಗಳಲ್ಲಿ ನೀರು ಸಮರ್ಪಕವಾಗಿ ಸಿಗುತ್ತದೆ. ಆದರೆ, ಏಪ್ರಿಲ್, ಮೇ ತಿಂಗಳ ಬೇಸಿಗೆಯಲ್ಲಿ ಹೆಚ್ಚಾಗಿ ನೀರಿನ ಕೊರತೆ ಕಾಡುತ್ತದೆ. ಇದನ್ನು ನೀಗಿಸಲು ಹತ್ತು ಕಿ.ಮೀ. ದೂರದ ಮುಂಡ್ರಿಗಿ ಗ್ರಾಮದ ಜಮೀನುಗಳಲ್ಲಿ ಬೋರೆವೆಲ್‌ಗಳಿಂದ ಪೈಪ್‌ಲೈನ್ ಅಳವಡಿಸಿಕೊಂಡು ಸಂಪರ್ಕ ಕಲ್ಪಿಸಕೊಳ್ಳಲಾಗಿದ್ದು, ಅದಕ್ಕೂ ತಿಂಗಳಿಗೆ ನಾಲವತ್ತ ಸಾವಿರ ರೂ. ಪಾವತಿಸಬೇಕು. ಇದೀಗ ಅದರ ಬೆಲೆಯೂ ಹೆಚ್ಚಳವಾಗಿದೆ. ಅಲ್ಲದೆ, ಜೀನ್ಸ್ ಘಟಕಗಳಿಗೆ ಕೊರೆಸಿದ ಬೋರೆವೆಲ್‌ಗಳಲ್ಲಿ ಅಂತರ್ಜಲ ಕಡಿಮೆಯಾಗಿ ನೀರಿನ ಕೊರತೆಯಾಗಿದೆ. ಕೆಲವರು ಖಾಸಗಿಯವರಿಂದ ನೀರಿನ ಟ್ಯಾಂಕರ್ ಖರೀದಿಸಿ ಉದ್ಯಮ ನಡೆಸುತ್ತಿದ್ದರೆ, ಇನ್ನು ಕೆಲವರು ನೀರಿನ ದರವೂ ಹೆಚ್ಚಳವಾಗಿರುವ ಕಾರಣ ವಾಷಿಂಗ್ ಘಟಕಗಳನ್ನೂ ನಡೆಸಿದರೂ ಬರುವ ಲಾಭ ಅಷ್ಟಕಷ್ಟೇ ಎಂದು ಮೂರ‌್ನಾಲ್ಕು ತಿಂಗಳು ಘಟಕವನ್ನೇ ಬಂದ್ ಮಾಡಲು ಮುಂದಾಗಿದ್ದಾರೆ. ಪರಿಣಾಮ ವಾಷಿಂಗ ಘಟಕಗಳನ್ನೇ ನೆಚ್ಚಿಕೊಂಡಿರುವ ಹಲವಾರು ಕಾರ್ಮಿಕರಲ್ಲಿ ತಾತ್ಕಲಿಕವಾಗಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಘಟಕದ ಬಳಿ ಕಾಲುವೆ ಹರಿವು : ಜೀನ್ಸ್ ಘಟಕ ಬಳಿಯ ತುಂಗಭದ್ರಾ ಜಲಾಶಯದ ಬಲದಂಡೆಯ ಎಚ್‌ಎಲ್‌ಸಿ ಕಾಲುವೆ ಹಾದು ಹೋಗಿರುವ ಹಿನ್ನೆಲೆಯಲ್ಲಿ ಚಿಕ್ಕದಾದ ಕೆರೆಯೊಂದನ್ನು ನಿರ್ಮಿಸಿ ಕಾಲುವೆಯಿಂದ ನೀರು ಪೂರೈಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವಂತೆ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಜಿಂದಾಲ್ ನಂತರ ಅತಿ ಹೆಚ್ಚು ಉದ್ಯೋಗ ನೀಡುತ್ತಿರುವುದು ಜೀನ್ಸ್ ಉದ್ಯಮ. ಆದರೆ, ಜಿಂದಾಲ್ ಸಂಸ್ಥೆ ಪ್ರತ್ಯೇಕ ಕೆರೆಯನ್ನೇ ನಿರ್ಮಿಸಿಕೊಂಡಿದೆ. ಆದರೆ, ಜೀನ್ಸ್ ಉದ್ಯಮಕ್ಕೆ ಕೆರೆ ನಿರ್ಮಿಸಿಕೊಡುವಲ್ಲಿ ನಿರ್ಲಕ್ಷೃ ತೋರುತ್ತಿದೆ. ಕಳೆದ ಎರಡು ದಶಕಗಳ ಹಿಂದಿನವರೆಗೂ ಜೀನ್ಸ್ ವಾಷಿಂಗ್ ಘಟಕಗಳು ಲಾಭದಲ್ಲಿ ನಡೆಯುತ್ತಿದ್ದವು. ಕೆಲ ವರ್ಷಗಳಿಂದ ವಾಷಿಂಗ್ ಘಟಕಗಳ ಸಂಖ್ಯೆ ಹೆಚ್ಚಾಗಿ ಸ್ಪರ್ಧೆ ಏರ್ಪಟ್ಟು ನಿಧಾನವಾಗಿ ವಾಷಿಂಗ್ ದರ ಕುಸಿತಕ್ಕೆ ಕಾರಣವಾಯಿತು. ಅಲ್ಲದೆ, ವಾಷಿಂಗ್‌ಗಾಗಿ ಬಳಸುವ ಕೆಮಿಕಲ್ ದರವೂ ಕೂಡ ದುಪ್ಪಟ್ಟು ಆಗಿದೆ ಎಂದು ಜೀನ್ಸ್ ಘಟಕದ ಮಾಲೀಕರೊಬ್ಬರು ತಿಳಿಸಿದರು.
ಕೋಟ್... ಜಿಲ್ಲೆಯ ಜೀನ್ಸ್ ಉದ್ಯಮ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ಜೀನ್ಸ್ ಚೇತರಿಕೆ ಬಗ್ಗೆ ಗಮನಹರಿಸುತ್ತಿಲ್ಲ. ಇದೆ ರೀತಿ ಇನ್ನೂ ಎರಡು ವರ್ಷ ನಡೆದರೆ ಸಂಪೂರ್ಣ ಜೀನ್ಸ್ ಉದ್ಯಮ ಬಂದ್ ಆಗಲಿದೆ.
- ಜಿ.ಮಲ್ಲಿಕಾರ್ಜುನಗೌಡ, ಕಾರ್ಯದರ್ಶಿ, ವಾಷಿಂಗ್ ಘಟಕ, ಬಳ್ಳಾರಿ.