ಜಂಗಮರ ಜಾಗೃತ ಸಮಾವೇಶ ಸೆ.18ಕ್ಕೆ

Published on

ಬಳ್ಳಾರಿ : ಇಲ್ಲಿನ ರಾಘವ ಕಲಾ ಮಂದಿರದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಪಾಲ್ಗೊಳ್ಳುವಿಕೆಗಾಗಿ ಸೆ.18 ರಂದು ಜಂಗಮರ ಜಾಗೃತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ ರಾಜ್ಯಾಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅದೇ ದಿನದಂದು ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ ಸಂಘಟನೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಹಿಂದುಳಿದ ವರ್ಗಗಳ ಆಯೋಗದಲ್ಲಿ ನಮ್ಮ ಜಾತಿ ‘ ವೀರಶೈವ ಜಂಗಮ ’ ಎಂಬುದಾಗಿ ನಮೂದಿಸಿ ಸೂಕ್ತ ಮಾಹಿತಿ ನೀಡಿದ ನಂತರ, ಆಯೋಗದ ವರದಿಯನ್ನು ಆಧಾರವಾಗಿಟ್ಟಿಕೊಂಡು, 2026ರ ಕೇಂದ್ರ ಸರ್ಕಾರ ಆಯೋಜಿಸುವ ಜಾತಿಜನಗಣತಿ ಕಾರ್ಯಕ್ರಮದಲ್ಲಿ ಜಾತಿಗಳ ಪಟ್ಟಿಯಲ್ಲಿ ನಮ್ಮ ವೀರಶೈವ ಜಂಗಮ ಹೆಸರನ್ನು ಸೇರಿಸಲು ಪರಿಷತ್ ಶ್ರಮವಹಿಸುತ್ತಿದೆ ಎಂದರು.

ಈ ಸಮಾವೇಶಕ್ಕೆ ಜಂಗಮರು, ವೀರಶೈವ ಜಂಗಮರು, ವೀರಶೈವ ಲಿಂಗಾಯತ ಜಂಗಮರು ಎಂಬ ನಂಬಿಕೆಯ ವೀರಮಹೇಶ್ವರ ಜಂಗಮರಿಗೆ ಸ್ವಾಗತ ಕೋರಲಾಗುವುದು. ಅಲ್ಲದೆ, ಹರ -ಗುರುಗಳು, ಜಂಗಮ ಮುಖಂಡರು, ಶಾಸಕರು, ಮಾಜಿ ಶಾಸಕರು, ವೀರಶೈವ ಲಿಂಗಾಯತ ಮುಖಂಡರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ದಾವಣಗೆರೆಯ ಸಮಾವೇಶದಲ್ಲಿ ಪರಮ ಪೂಜ್ಯ ಪಂಚ ಪೀಠಾದೀಶ್ವರ ಜಗದ್ಗುರುಗಳ ಆದೇಶದಂತೆ ‘ ವೀರಶೈವ ಲಿಂಗಾಯತ ’ ಎಂಬುದಾಗಿ ಜಾತಿ/ ಉಪಜಾತಿಯ ಕಾಲಂನಲ್ಲಿ ಅವರವರ ಜಾತಿ ಬರೆಸಲು ಸೂಚಿಸಿದ್ದಾರೆ. ಆದ್ದರಿಂದ, ಜಂಗಮರಾದ ನಾವು ಜಂಗಮ/ ವೀರಶೈವ ಜಂಗಮ ಎಂದು ಬರೆಸುವ ಬಗ್ಗೆ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಗಣತಿಯ 60 ಪ್ರಶ್ನೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು. ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಗೌರಿಶಂಕರ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಚಂದ್ರಮೌಳಿ, ಖಜಾಂಚಿಗಳಾದ ಎಂ.ನಾಗರಾಜ ಸ್ವಾಮಿ, ವಿ.ಎಸ್.ಪ್ರಭಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net