

ಬಳ್ಳಾರಿ: ರಾಜ್ಯದ ಸಮಗ್ರ ನೀರಾವರಿ ಮತ್ತು ಕುಡಿವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಿ ಜೆಡಿಎಸ್ ಆಶ್ರಯದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನತಾ ಜಲಧಾರೆ ಯಾತ್ರೆ ಏ.27ರಂದು ಗಣಿನಾಡು ಬಳ್ಳಾರಿ ಪ್ರವೇಶಿಸಲಿದ್ದು, ಇದನ್ನು ಅದ್ದೂರಿಯಾಗಿ ಸ್ವಾಗತಿಸುವ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಏ.27ರಂದು ಜಿಲ್ಲೆಯ (ಸಿರಗುಪ್ಪ ತಾಲೂಕಿಗೆ) ಪ್ರವೇಶಿಸಲಿದೆ. ಅಲ್ಲಿಂದ ನೇರ ಬೈಕ್‌ರ‌್ಯಾಲಿ ಮೂಲಕ ಸ್ವಾಗತಿಸಿ, ಕಂಪ್ಲಿ ಕ್ಷೇತ್ರಕ್ಕೆ ತೆರಳಲಿದೆ. ಕಂಪ್ಲಿ ವ್ಯಾಪ್ತಿಯ ಬೈಲೂರಲ್ಲಿ ರೈತ ಮುಖಂಡರಿಂದ ವಿಶೇಷ ಪೂಜೆ ಬಳಿಕ ಬಹಿರಂಗ ಸಭೆ ನಡೆಯಲಿದೆ ಎಂದರು.
ನಂತರ ಬಳ್ಳಾರಿಗೆ ರಥಯಾತ್ರೆ ಆಗಮಿಸಲಿದ್ದು, ಇಲ್ಲಿನ ಅಹಂಬಾವಿ ಪ್ರದೇಶದ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ 200-300 ಬೈಕ್‌ಗಳ ಬೃಹತ್ ರ‌್ಯಾಲಿಯು ನಗರದ ಎಸ್ಪಿ ವೃತ್ತ, ರಾಯಲ್ ವೃತ್ತ, ಸಂಗಮ್ ವೃತ್ತದ ಮೂಲಕ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲ ತಲುಪಲಿದೆ. ಬಳಿಕ 2 ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ಕಳಸ, ಪೂರ್ಣಕುಂಭ ಮೆರವಣಿಗೆ ನಡೆಯಲಿದೆ. ಏ.28 ಹಾಗೂ 29ರಂದು ಜಲಧಾರೆ ಯಾತ್ರೆ ಸಂಡೂರು ತಾಲೂಕಿನಲ್ಲಿ ಸಂಚರಿಸಲಿದೆ. 29ರಂದು ಸಂಡೂರು ಎಪಿಎಂಸಿ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಪಕ್ಷದ ಬಳ್ಳಾರಿ ಉಸ್ತುವಾರಿಗಳಾದ ಎಂಎಲ್ಸಿ ತಿಪ್ಪೇಸ್ವಾಮಿ, ಶಾಸಕರಾದ ರಾಜ ವೆಂಕಟಪ್ಪನಾಯಕ, ನಾಡಗೌಡ, ನಬೀ ಸೇರಿ ಜಿಲ್ಲೆಯ ಮುಖಂಡರು ಆಗಮಿಸಲಿದ್ದಾರೆ ಎಂದರು.