

ಬಳ್ಳಾರಿ: ಜಲಜೀವನ್ ಮಿಷನ್ ಅಡಿ ಜಿಲ್ಲೆಯಲ್ಲಿರುವ ಪ್ರತಿ ಮನೆಗೂ ಶುದ್ಧ ಕುಡಿವ ನೀರಿನ ಸಂಪರ್ಕ ಕಲ್ಪಿಸುವುದಕ್ಕೆ ವಿಶೇಷ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೂಚನೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಲಜೀವನ್ ಮಿಷನ್ ಅಡಿ ಮೊದಲ ಹಂತದಲ್ಲಿ 20,613 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿತ್ತು. ಇದುವರೆಗೆ 15,719 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಉಳಿದವುಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಇ ವಿವರಿಸಿದರು.
ಜೆಜೆಎಂ ಮೊದಲ ಹಂತದಡಿ ಒಟ್ಟು 92ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಡಿ 15 ಕಾಮಗಾರಿಗಳು ರೇಟ್ರೋ ಫಿಲ್ಲಿಂಗ್ ವರ್ಕ್ ತೆಗೆದುಕೊಳ್ಳಲಾಗಿದ್ದು, ಅದರಡಿ ಕೆರೆ ಸಾಮರ್ಥ್ಯ ಕಡಿಮೆ ಇರುವುದನ್ನು ಹೆಚ್ಚಿಸುವುದು, ಹೂಳು ತೆಗೆಸುವುದು, ಹೊಸ ಕೆರೆ ನಿರ್ಮಿಸುವ ಹಾಗೂ ಇನ್ನಿತರ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ಸಭೆಗೆ ವಿವರಿಸಿದರು.
ಇದನ್ನು ಆಲಿಸಿದ ಸಚಿವ ಬಿ.ಶ್ರೀರಾಮುಲು, ಏ.30ರೊಳಗೆ ಜೆಜೆಎಂ ಅಡಿ ಕೈಗೆತ್ತಿಕೊಂಡ ಎಲ್ಲ ಕಾಮಗಾರಿ ಪೂರ್ಣಗೊಳಿಸಬೇಕು. ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜೆಜೆಎಂ ಎರಡು ಹಾಗೂ ಮೂರನೇ ಹಂತದ ಕಾಮಗಾರಿಗಳು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು. ಮೂರು ಹಂತದಡಿ ತೆಗೆದುಕೊಳ್ಳದ ಕಾಮಗಾರಿಗಳನ್ನು ನಾಲ್ಕನೇ ಹಂತದಡಿ ಕೈಗೆತ್ತಿಕೊಂಡು ಜಿಲ್ಲೆಯಲ್ಲಿರು ಎಲ್ಲ ಮನೆಗಳಿಗೂ ನಳದ ಸಂಪರ್ಕ ಕಲ್ಪಿಸಿ ಶುದ್ಧ ಕುಡಿವ ನೀರು ಒದಗಿಸುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ 1,92,628 ಮನೆಗಳಿದ್ದು, ಅವುಗಳಲ್ಲಿ ಜೆಜೆಎಂ ಮೂರು ಹಂತದಲ್ಲಿ 1,24,282 ಮನೆಗಳಿಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಮೂರು ಹಂತಗಳಲ್ಲಿ ಸೇರದ 68 ಸಾವಿರ ಮನೆಗಳಿಗೆ ನಾಲ್ಕನೇ ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಸಂಪರ್ಕ ಕಲ್ಪಿಸಲಾಗುವುದು ಎಂದರು.
4 ಕೋಟಿ ರೂ. ಬಿಡುಗಡೆ
ಜಿಲ್ಲೆಯಲ್ಲಿ ಸಮಾಜಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚುವರಿ ವಸತಿ ನಿಲಯಗಳ ಅಗತ್ಯವಿರುವುದು ಗಮನಕ್ಕಿದ್ದು, ಎಷ್ಟೆಷ್ಟು ಅಗತ್ಯ ಎನ್ನುವುದರ ಪಟ್ಟಿ ಒದಗಿಸಿ ವಸತಿ ನಿಲಯಗಳನ್ನು ಒದಗಿಸಲು ಕ್ರಮವಹಿಸಲಾಗುವುದು. ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣದ ಉಳಿದ ಕಾಮಗಾರಿ ಪೂರ್ಣಗೊಳ್ಳಲು 50 ಲಕ್ಷ ರೂ.ಅಗತ್ಯವಿದ್ದು, ಅದನ್ನು ಒದಗಿಸಲು ಕ್ರಮವಹಿಸಲಾಗುವುದು. ಬಳ್ಳಾರಿಯಲ್ಲಿರುವ ಬೃಹತ್ ವಾಲ್ಮೀಕಿ ಭವನದಲ್ಲಿ ಆಸನಗಳ ಅಳವಡಿಸುವಿಕೆ, ಧ್ವನಿವರ್ಧಕಗಳ ಸೌಲಭ್ಯ ಸೇರಿದಂತೆ ಇನ್ನೀತರ ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಇಲಾಖೆಯು 4 ಕೋಟಿ ರೂ. ಬಿಡುಗಡೆ ಮಾಡಿದ್ದು, ಅತ್ಯಂತ ಗುಣಮಟ್ಟದಿಂದ ಕೆಲಸ ಮಾಡುವಂತೆ ಸೂಚನೆ ನೀಡಿದರು. ಜಿಪಂ ಸಿಇಒ ಜೆ.ಲಿಂಗಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.