ನೀರಾವರಿ ಸಲಹಾ ಸಮಿತಿ ಕರೆಯಲಿ

Published on

ಬಳ್ಳಾರಿ ; ತುಂಗಭದ್ರ ಜಲಾಶಯಕ್ಕೆ ದಿನೇದಿನೆ ಒಳಹರಿವು ಹೆಚ್ಚುತ್ತಿದ್ದು, ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚರ್ಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಹೇಳಿದರು.

ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ವಿವಿಧಡೆ ಮಳೆಯಾಗುತ್ತಿರುವುದರಿಂದ ಜಿಲ್ಲಾದ್ಯಂತ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಆದರೆ, ತುಂಗಭದ್ರ ಜಲಾಶಯಕ್ಕೆ ಈ ಬಾರಿ ಹೊಸ ಕ್ರಸ್ಟ್‌ಗೇಟ್ ಅಳವಡಿಸುವುದು ಅನುಮಾನವಿದೆ. ಸಂಪೂರ್ಣವಾಗಿ ಜಲಾಶಯ ಭರ್ತಿಯಾದರೆ ಕ್ರಸ್ಟ್‌ಗೇಟ್‌ಗಳು ಹಾನಿಯಾಗಲಿವೆ ಎಂಬುದಾಗಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈವರೆಗೂ ಸರ್ಕಾರ ಎರಡನೇ ಬೆಳೆಗೆ ನೀರು ಹರಿಸುವ ಬಗ್ಗೆ ಸ್ಪಷ್ಟವಾದ ಮಾಹಿತಿ ರೈತರಿಗೆ ತಿಳಿಸುತ್ತಿಲ್ಲ. ಆದ್ದರಿಂದ, ಕೂಡಲೇ ಜಲಾಶಯದಿಂದ ನೀರು ಹರಿಸುವುದರ ಬಗ್ಗೆ ಸಲಹಾ ಸಮಿತಿ ಸಭೆ ಕರೆದು ಚರ್ಚಿಸಬೇಕು. ಜೂ 25 ರಿಂದ ಎಲ್‌ಎಲ್‌ಸಿ ಹಾಗೂ ಎಚ್‌ಎಲ್‌ಸಿ ಕಾಲುವೆಗಳಿಗೆ ನೀರು ಹರಿಸಿದರೆ ರೈತರು ಭತ್ತ ನಾಟಿ ಮಾಡಿಕೊಳ್ಳಲು ಅನುಕೂಲವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲೆಯ ಶಾಸಕರು ಸೇರಿ ಸಮಿತಿ ಅಧ್ಯಕ್ಷರ ಜತೆ ಸಭೆ ಹಾಗೂ ಕಾಲುವೆಗಳಿಗೆ ನೀರು ಹರಿಸುವುದರ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸರ್ಕಾರ ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಂಘದ ಪದಾಧಿಕಾರಿಗಳಾದ ಲೇಪಾಕ್ಷಿಗೌಡ, ಪಂಪನಗೌಡ, ಬಸವರಾಜಸ್ವಾಮಿ, ಉಮಾಪತಿಗೌಡ, ವಿಶ್ವನಾಥ, ಕೆ.ವಿ.ತಿಮ್ಮರೆಡ್ಡಿ, ಪಂಪನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net