ಐಪಿಎಸ್ ದಯಾನಂದ ಮರುನೇಮಕಗೊಳಿಸಿ

Published on

ಬಳ್ಳಾರಿ : ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿರುವ ಐಪಿಎಸ್ ಅಧಿಕಾರಿ, ಬೆಂಗಳೂರಿನ ನಿಕಟಪೂರ್ವ ಪೊಲೀಸ್ ಆಯುಕ್ತ ಬಿ.ದಯಾನಂದ ಅವರನ್ನು ಮರು ನೇಮಕ ಮಾಡಬೇಕೆಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ ಹೇಳಿದರು.

ಇಲ್ಲಿನ ಡಿಸಿ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿ, ಉತ್ತಮ ಅಧಿಕಾರಿ ಎನಿಸಿಕೊಂಡಿರುವ ದಯಾನಂದ ಅವರನ್ನು ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಅವಘಡಕ್ಕೆ ಹೊಣೆ ಮಾಡಿ ಅಮಾನತು ಮಾಡಿರುವುದು ಖಂಡನೀಯ ಎಂದರು.

ಆರ್‌ಸಿಬಿ ಸಂಭ್ರಮ ವೇಳೆ ನಡೆದ ಕಾಲ್ತುಳಿತ ಪ್ರಕರಣದ ತನಿಖೆಯೇ ಆಗಿಲ್ಲ, ತಪ್ಪಿತಸ್ಥರು ಯಾರೆಂದು ಗೊತ್ತಾಗಿಲ್ಲ. ಹೀಗೆ ಏಕಾಏಕಿ ಶೋಷಿತ ಸಮುದಾಯದ ಅದರಲ್ಲೂ ಅಖಂಡ ಜಿಲ್ಲೆಯ ದಯಾನಂದ ಅವರ ಅಮಾನತನ್ನು ತಕ್ಷಣ ಹಿಂಪಡೆದು, ಬೆಂಗಳೂರಿನ ಪೊಲೀಸ್ ಆಯುಕ್ತರನ್ನಾಗಿ ನೇಮಕಗೊಳಿಸಿ ಎಂದರು.

ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ಎ.ಮಾನಯ್ಯ ಮಾತನಾಡಿ, ತಮ್ಮ ಈವರೆಗಿನ ಸೇವಾ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ದಯಾನಂದ ಅವರ ಮರು ನೇಮಕ ಆಗಬೇಕು. ಅವರ ಅಮಾನತು ರದ್ದು ಮಾಡಿ ಸರ್ಕಾರ ಈ ಹಿಂದಿನ ಹುದ್ದೆ ನೀಡಬೇಕೆಂದು ಆಗ್ರಹಿಸಿದರು. ಬಳಿಕ ಎಡಿಸಿ ಮಹಮ್ಮದ್ ಎನ್ ಜುಬೇರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net