ಬೋಧಕರಿಗೆ ಐಪಿಆರ್ ಅರಿವು ಮುಖ್ಯ- ಕುಲಪತಿ ಪ್ರೊ.ಸಿದ್ದು ಅಲಗೂರ ಕಿವಿಮಾತು

110222 Ballari Intellectual Property Rights and Patent Filing Workshop
ವಿಎಸ್‌ಕೆ ವಿವಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್) ಮತ್ತು ಪೇಟೆಂಟ್ ಫೈಲಿಂಗ್ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು.
Published on

ಬಳ್ಳಾರಿ: ವಿಶ್ವವಿದ್ಯಾಲಯ ಅಥವಾ ಇನ್ನಿತರ ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಅನೇಕ ಬೋಧಕರು ಗುಣಮಟ್ಟದ ಸಂಶೋಧನಾ ಲೇಖನ, ಪುಸ್ತಕ ಬರೆದರೂ ಅವುಗಳ ಬೌದ್ಧಿಕ ಆಸ್ತಿ ಹಕ್ಕುಗಳು(ಐಪಿಆರ್) ಕುರಿತು ಅವರಿಗೆ ಅರಿವು ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರ ಹೇಳಿದರು.

ನಗರದ ಹೊರ ವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ)ದಿಂದ ಶುಕ್ರವಾರ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಪೇಟೆಂಟ್ ಫೈಲಿಂಗ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಬಹುಶಿಸ್ತೀಯ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಪ್ರತಿಯೊಬ್ಬರೂ ತಮ್ಮ ಬರಹ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ದೇಶದ ಬಹುತೇಕ ಸರ್ಕಾರಿ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳು ಸಂಶೋಧನಾ ಲೇಖನ, ಪೇಟೆಂಟ್‌ಗಳಿಗೆ, ಉತ್ತಮ ಪಿಎಚ್‌ಡಿ ಮಾರ್ಗದರ್ಶನಗಳನ್ನು ನೇಮಕಾತಿಗೆ ಪರಿಗಣಿಸುತ್ತವೆ. ಇವುಗಳ ಪ್ರಕಟಣೆ ಜತೆಗೆ ನಮ್ಮದೇ ಕೃತಿ ಸ್ವಾಮ್ಯ ಹೊಂದಿದರೆ ಲೇಖಕರಿಗೆ ವಿಶೇಷ ಪ್ರಾತಿನಿಧ್ಯ ದೊರೆಯುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರುದ್ರೇಶ್ ವಾತನಾಡಿ, ಭಾರತದಲ್ಲಿ ಐಪಿಆರ್ ಕುರಿತ ತಿಳಿವಳಿಕೆ ಕಡಿಮೆಯಿದ್ದು, ಚೀನಾ ಐಪಿಆರ್ ಫೈಲಿಂಗ್ ಹಾಗೂ ಪೇಟೆಂಟ್ ಪಡೆಯುವಲ್ಲಿ ಮುಂದೆ ಇದೆ. ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಯಾವುದೇ ಚೌಕಟ್ಟಿಲ್ಲ, ಕೃಷಿಕರಿಂದ ಹಿಡಿದು ವಾಣಿಜ್ಯೋದ್ಯಮಿಯವರೆಗೆ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದರು.

ಐಕ್ಯೂಎಸಿ ನಿರ್ದೇಶಕ ಪ್ರೊ. ತಿಪ್ಪೇರುದ್ರಪ್ಪ ಜೆ., ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನ ಐಪಿಆರ್ ಸಲಹೆಗಾರ ಡಾ.ಪ್ರವೀಣ್ ಕುವಾರ್ ಎಂ.ವಿ., ವಿಶ್ವವಿದ್ಯಾಲಯ ಮತ್ತು ಎಲ್ಲ ಸ್ನಾತಕೋತ್ತರ ಕೇಂದ್ರಗಳ ಕಾಯಂ ಬೋಧಕ ಸಿಬ್ಬಂದಿ ಕಾರ್ಯಾಗಾರದಲ್ಲಿ ಇದ್ದರು. ಡಾ.ಅರ್ಚನಾ ನಿರೂಪಿಸಿದರು. ಡಾ.ರಾಘವೇಂದ್ರ ಸ್ವಾಗತಿಸಿದರು. ಕೃಷ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net