ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ

Published on

ಬಳ್ಳಾರಿ ; ಪ್ರತಿಯೊಬ್ಬರು ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿ ಪರಿಸರ ಮಾಲಿನ್ಯ ತಡೆಗಟ್ಟಲು ಕೈಜೋಡಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ನಗರದ ಅರಣ್ಯ ಇಲಾಖೆಯ ನರ್ಸರಿ ಪ್ರಕೃತಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಸರ ಸ್ನೇಹಿ ವೃಕ್ಷ ಗಣೇಶ ಮೂರ್ತಿ ಮಣ್ಣಿನಿಂದ ತಯಾರಿಸುವ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಮಣ್ಣಿನ ಮೂರ್ತಿಯ ಗಣೇಶನಲ್ಲಿ ವಿವಿಧ ಸಸ್ಯಗಳ ಬೀಜಗಳನ್ನು ಇಟ್ಟಿರುವುದರಿಂದ ಮನೆಯ ಮುಂದಿನ ಕುಂಡದಲ್ಲಿ ಮೂರ್ತಿಗೆ ನೀರು ಹಾಕುವುದರ ಮೂಲಕ ವಿಸರ್ಜನೆ ಮಾಡಿ ಅದು ಸಸಿಯಾಗಿ ಬೆಳೆಯುತ್ತದೆ ಎಂದು ತಿಳಿಸಿದರು.

ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ಮಾತನಾಡಿ, ಪಿಒಪಿ. ಗಣೇಶ ಮೂರ್ತಿಯನ್ನು ನದಿ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡುವುದರಿಂದ ಅದರ ವಿಷಕಾರಕಗಳು ಪರಿಸರಕ್ಕೆ ಹಾನಿಕಾರಕ ಆಗುವುದಲ್ಲದೇ ನೀರಿನಲ್ಲಿ ಬೆರೆತು ಬೆಳೆದ ಬೆಳೆಯ ಮೂಲಕ ಸಹ ನಮ್ಮ ದೇಹ ಸೇರಿ ಅನಾರೋಗ್ಯ ಉಂಟುಮಾಡುತ್ತವೆ ಎಂದು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ ಮಾತನಾಡಿ, ಜಿಲ್ಲಾ ಅರಣ್ಯ ಇಲಾಖೆ ವತಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಣ್ಣಿನಿಂದ ಗಣೇಶ ಮೂರ್ತಿ ತಯಾರು ಮಾಡುವ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗವನ್ನು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹಂಪಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಪಿಎಚ್‌ಡಿ ಸಂಶೋಧನಾರ್ಥಿಗಳು ಮಣ್ಣಿನ ಗಣೇಶ ಮೂರ್ತಿ ಮಾಡುವ ತರಬೇತಿ ನೀಡಿದರು. ವಿವಿಧ 20 ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ ಸುಮಾರು 2700 ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net