ವೈಜ್ಞಾನಿಕ ಪ್ರಗತಿಗೆ ಪ್ರೇರೇಪಿಸಿ

Published on

ಬಳ್ಳಾರಿ : ದೇಶದ ಉತ್ತಮ ಭವಿಷ್ಯಕ್ಕಾಗಿ ವೈಜ್ಞಾನಿಕ ಪ್ರಗತಿಯನ್ನು ಮುಂದುವರೆಸಲು ಯುವ ಮನಸ್ಸುಗಳನ್ನು ಪ್ರೇರೇಪಿಸುವ ಗುರಿಯನ್ನು ನಾವೆಲ್ಲರೂ ಹೊಂದಬೇಕು ಎಂದು ಪುಣೆಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಎಜುಕೇಶನ್ ರಿಸರ್ಚ್ ಸಂಸ್ಥೆಯ ಪ್ರೊ. ಡಾ.ಮೊಹ್ಮದ್ ಮುಸ್ತಫಾ ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರ ಸಬಲೀಕರಣ ಎಂಬ ವಿಷಯದ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೂತನ ಆವಿಷ್ಕಾರಗಳು ವಿಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳಿಂದ ಗುರುತಿಸಲ್ಪಡುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ವೈಜ್ಞಾನಿಕ ಸಂಶೋಧನೆಯ ಪ್ರಾಮುಖ್ಯತೆ ಬಗ್ಗೆ ವಿಸ್ತೃತವಾಗಿ ತಿಳಿಸಿದರು.

ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ದೇಶದ ಯುವಕರು ವಿಜ್ಞಾನ ಕ್ಷೇತ್ರದತ್ತ ಮತ್ತಷ್ಟು ಆಸಕ್ತಿ ಬೆಳೆಸಿಕೊಳ್ಳಬೇಕು. ದೇಶದ ಪ್ರತಿಷ್ಠಿತ ವಿಜ್ಞಾನಿಗಳಿಂದ ಸ್ಪೂರ್ತಿ ಪಡೆದು, ಹೊಸ ಅವಿಷ್ಕಾರಗಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು. ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ನಮ್ಮ ದೇಶವು ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ನಾವು-ನೀವೆಲ್ಲ ಕೆಲಸ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ವಿವಿ ಕುಲಸಚಿವ ಎಸ್.ಎನ್.ರುದ್ರೇಶ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಹೊಂದಿರಬೇಕು. ವಿಜ್ಞಾನದ ಪರಂಪರೆಯು ಒಂದು ಸಾರ್ವತ್ರಿಕ ಅಭಿಯಾನದಂತೆ ಜಗತ್ತಿನಲ್ಲಿ ಪರಿಗಣಿಸಲಾಗಿದೆ. ಡಾ. ಅಬ್ದುಲ್ ಕಲಾಂ, ಪ್ರೊ. ಸಿ.ವಿ.ರಾಮನ್‌ರಂತಹ ವ್ಯಕ್ತಿಗಳನ್ನು ಮಾದರಿಯಾಗಿ ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net