ಬಳ್ಳಾರಿ : ಬಾಹ್ಯ ವಸ್ತುಗಳ ಗಳಿಕೆಯ ಬೆನ್ನುಹತ್ತಿದ ಅಂತರಂಗದ ಸುಖ ಮತ್ತು ಶಾಂತಿ ಕಳೆದುಕೊಂಡಿದ್ದೇವೆ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದಿಂದ ಈದ್ ಮಿಲಾದ್ ಅಂಗವಾಗಿ ‘ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ (ಸ) ಎಂಬ ವಿಷಯದ ಕುರಿತು ಭಾನುವಾರ ಆಯೋಜಿಸಿದ್ದ ವಿಚಾರಗೋಷ್ಠಿ ’ ಉದ್ಘಾಟಿಸಿ ಮಾತನಾಡಿದರು. ಸತ್ಯ, ನ್ಯಾಯದ ಪ್ರತಿಪಾದನೆ ಪ್ರಾಮಾಣಿಕತೆಯನ್ನು ಪ್ರವಾದಿ ಮುಹಮ್ಮದ್‌ರು ತಾವು ಪರಿಪಾಲಿಸುತ್ತಿದ್ದರು. ಜತೆಗೆ ಅದಕ್ಕೆ ಧಾರ್ಮಿಕ ಚೌಕಟ್ಟನ್ನು ಕಲ್ಪಿಸುವ ಮೂಲಕ ಜನ ಸಾಮಾನ್ಯರಿಗೆ ನೈತಿಕ ಸನ್ಮಾರ್ಗವನ್ನು ಕುರಾನ್ ಮೂಲಕ ಬೋಧಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಳಕಲ್ಲಿನ ಲಾಲ್ ಸಾಬ್ ಕಂದಗಲ್ ಮಾತನಾಡಿ, ಧರ್ಮಗಳನ್ನು ಸ್ವಾರ್ಥಕ್ಕಾಗಿ, ಸೌಹಾರ್ದತೆ ಸಹಬಾಳ್ವೆ ಕದಡಲು ಬಳಸಬಾರದು. ಜನರು ಧರ್ಮ ಮಾರ್ಗದಲ್ಲಿ ನಡೆದು ಇಹ-ಪರಗಳಲ್ಲಿಯೂ ಸಲ್ಲುವಂತವರಾಗಬೇಕೆಂದು ತಿಳಿಸಿದರು.