ಭಾರತ ಪ್ರಥಮ ಸ್ಥಾನ ಪಡೆಯುವ ವಿಶ್ವಾಸವಿದೆ

Published on

ಬಳ್ಳಾರಿ : ದೇಶವು ಆಧ್ಯಾತ್ಮಿಕ, ಭೌತಿಕ, ಆರ್ಥಿಕ ಹಾಗೂ ತಾಂತ್ರಿಕವಾಗಿ ಸಶಕ್ತಗೊಂಡಿದೆ. ವಿಶ್ವದ ಬಲಿಷ್ಠ ರಾಷ್ಟಗಳ ಪಟ್ಟಿಯಲ್ಲಿ ಮುಂಬರುವ ದಿನಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಎಂಬ ವಿಶ್ವಾಸವಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ ನಿಕಾಯದ ಮಾಜಿ ಡೀನ ಪ್ರೊ.ಕೆ. ಈರೇಸಿ ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ವಿವಿ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಪಂಚದೆಲ್ಲೆಡೆ ಪ್ರಾಬಲ್ಯ ಮೆರೆಯಲು ಹಲವು ದೇಶಗಳು ಪೈಪೋಟಿ ನಡೆಸುತ್ತಿವೆ. ಅದರ ಭಾಗವಾಗಿ ಇಂದು ಅಮೆರಿಕವು ಭಾರತದ ಮೇಲೆ ಟ್ರೇಡ್‌ವಾರ್ ಎಂಬ ಅಸ್ತ ಪ್ರಯೋಗಿಸಿದೆ. ಇದಕ್ಕೆ ಪ್ರತ್ಯುತ್ತರ ನೀಡಲು ದೇಶವು ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವುದು ಉತ್ತಮ. ಇದಕ್ಕೆ ಒಂದೇ ಪರಿಹಾರ ಎಂದರೆ ದೇಶದ ಪ್ರತಿಯೊಬ್ಬ ನಾಗರಿಕನು ತನ್ನ ಕೊನೆಯುಸಿರಿನವರೆಗೆ ನಿರಂತರ ಕಲಿಕೆ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ತಂತ್ರಜ್ಞಾನ ಯುಗದಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಮುಂದಿನ ಪೀಳಿಗೆಯ ಉದ್ಯಮಶೀಲರನ್ನಾಗಿಸಲು ಪ್ರತಿಯೊಬ್ಬ ಉಪನ್ಯಾಸಕರು ನಿರಂತರ ಕಲಿಕಾ ಕ್ರಮಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.

ಲಂಡನ್‌ನ ಇನ್ಸಿಟ್ಯೂಟ್ ಆಫ್ ಅನಲಿಟಿಕ್ಸ್ನ್ ಶಿಕ್ಷಣಶಾಸ್ತ್ರದ ನಿರ್ದೇಶಕ ಡಾ ಕ್ಲೇರ್ ವಾಲ್ಷ್ ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ಜಗತ್ತಿನ ಅಗ್ರಗಣ್ಯ ಕಂಪನಿ ಮತ್ತು ಉದ್ಯಮಿಗಳು ಅಳವಡಿಸಿಕೊಂಡಿದ್ದಾರೆ. ಎಐ ತಂತ್ರಜ್ಞಾನವು ಕೆಲವು ಸಂದರ್ಭಗಳಲ್ಲಿ ಮಾನವನ ಕಲಿಕಾ ಕೌಶಲ್ಯಗಳನ್ನು ಕುಂಠಿತಗೊಳಿಸುತ್ತವೆ. ಆದಾಗ್ಯೂ ಇಂದಿನ ಅಗತ್ಯತೆಗೆ ತಕ್ಕಂತೆ ಎಐ ಬಳಕೆ ಮಾಡಿಕೊಂಡು ಕೆಲಸ ಮಾಡುವ ಅನಿವಾರ್ಯತೆ ಎಲ್ಲೆಡೆ ಮನೆಮಾಡಿದೆ ಎಂದರು.

ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ. ಮುನಿರಾಜು ಮಾತನಾಡಿ, ಎಐ ಮತ್ತು ಅನಾಲಿಟಿಕ್ಸ್ ಪ್ರಸ್ತುತವಾಗಿ ಪ್ರಾಮುಖ್ಯತೆ ಪಡೆದುಕೊಂಡಿರುವ ಕ್ಷೇತ್ರಗಳಾಗಿವೆ. ವಿವಿಯ ಅಧೀನದ ಎಲ್ಲ ವಾಣಿಜ್ಯಶಾಸ್ತ್ರ ಉಪನ್ಯಾಸಕರಿಗೆ ಬಿಸಿನೆಸ್ ಅನಾಲಿಟಿಕ್ಸ್ ವಿಷಯದ ಕುರಿತು ತರಬೇತಿ ಕಾರ್ಯಾಗಾರ ನಡೆಸಲು ಕ್ರಮ ವಹಿಸಲಾಗುವುದು. ಎಐ ಕುರಿತು ಪರಿಣಿತಿ ಪಡೆದುಕೊಂಡು ಕೌಶಲ್ಯ ವೃದ್ಧಿಸಿಕೊಂಡರೆ ವಿದ್ಯಾರ್ಥಿಗಳು ವಿಶ್ವದ ಯಾವ ದೇಶದಲ್ಲಾದರು ಕೆಲಸ ಗಿಟ್ಟಿಸಿಕೊಳ್ಳಬಹುದು ಎಂದರು.

ಸಮ್ಮೇಳನದಲ್ಲಿ ವಿವಿಧ ದೇಶಗಳ, ಹಲವಾರು ರಾಜ್ಯಗಳ 200ಕ್ಕೂ ಹೆಚ್ಚು ಸಂಶೋಧಕರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net