ಅನಿರ್ಧಿಷ್ಟಾವಧಿ ಲಾರಿ ಮುಷ್ಕರ ಏ.15ರಂದು

Published on

ಬಳ್ಳಾರಿ : ಡೀಸಲ್ ದರ, ಟೋಲ್ ಹಾಗೂ ಎಫ್‌ಸಿ ಶುಲ್ಕ ಕಡಿಮೆಗೊಳಿಸುವಂತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಏ.15ರಂದು ಲಾರಿ ಮಾಲೀಕರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ವಿ.ಶ್ರೀನಿವಾಸಲು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವರ್ಷ ಜೂನ್‌ನಲ್ಲಿ ಮೂರು ರೂ. ಡೀಸಲ್ ದರ ಹೆಚ್ಚಳ ಮಾಡಿದ್ದರು. ಈಗ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ಸರ್ಕಾರ 2 ರೂ. ಡೀಸಲ್ ದರ ಹೆಚ್ಚಿಸಿ ಲಾರಿ ಉದ್ಯಮದ ಮೇಲೆ ಬರೆ ಎಳೆದಿದೆ. ಅದೇ ರೀತಿಯಾಗಿ ರಾಜ್ಯದಲ್ಲಿ 18 ರಾಜ್ಯ ಹೆದ್ದಾರಿ ಟೋಲ್ ಬೂತ್‌ಗಳಲ್ಲಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಪ್ರತಿ ವಾಹನಕ್ಕೆ ರಸ್ತೆ ತೆರಿಗೆ ಕಟ್ಟುತ್ತಿದ್ದೆವೆ ಎಂದು ತಿಳಿಸಿದರು.

ಸರ್ಕಾರಕ್ಕೆ ಲಾರಿ ಉದ್ಯಮದಿಂದ ಅತಿ ಹೆಚ್ಚು ತೆರಿಗೆ ಜಮಾ ಆಗುತ್ತಿದೆ. ವಾಹನಗಳ ಬಿಡಿಭಾಗಗಳಾದ (ಸ್ಟೆರ್ ಪಾರ್ಟ್ಸ್, ಟೈರ್, ಟ್ಯುಬ್ ಸೇರಿ ಇತರೆ ವಸ್ತುಗಳ ಮೇಲೆ ಹೆಚ್ಚು ತೆರಿಗೆ ಪಾವತಿ ಮಾಡಲಾಗುತ್ತಿದೆ. ಸರ್ಕಾರದಿಂದ ಲಾರಿ ಉದ್ಯಮಕ್ಕೆ ಯಾವುದೇ ಅಗತ್ಯ ಅನುಕೂಲ ಇಲ್ಲದಿದ್ದರೂ, ಬೆಲೆ ಏರಿಕೆಗಳಿಂದ ಲಾರಿ ಮಾಲೀಕರು ತತ್ತಾರಿಸಿದ್ದಾರೆ. ಉದ್ಯಮದ ಮೇಲೆ ಬಹಳ ವ್ಯತಿರಿಕ್ತವಾದ ಪರಿಣಾಮ ಉಂಟಾಗುವುದರಿಂದ ಚಾಲಕ ಕೊರತೆ ಎದುರಿಸುತ್ತಿದ್ದೆವೆ. ವಾಹನಗಳಿಗೆ ಪ್ರವೇಶವಿಲ್ಲ ಹೆಸರಿನಲ್ಲಿ ಚಾಲಕರಿಗೆ ಪೊಲೀಸರು ಮತ್ತು ಆರ್‌ಟಿಒಗಳಿಂದ ಕಿರುಕುಳ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಸಂಘದ ಉಪಾಧ್ಯಕ್ಷ ಕೆ.ನೂರ್ ಮಹಮ್ಮದ್, ಕಾರ್ಯದರ್ಶಿ ಎಂ.ಮೆಹಬೂಬ್ ಭಾಷಾ ಇದ್ದರು.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net