ಮೀಸಲು ಪ್ರಮಾಣ ಹೆಚ್ಚಿಸಿ: ಹೋರಾಟ ಕ್ರಿಯಾ ಸಮಿತಿ ಒತ್ತಾಯ, ಬೃಹತ್ ಪ್ರತಿಭಟನೆ

21092022 bellary sc st reservation protest
Published on

ಬಳ್ಳಾರಿ: ಎಸಿ, ಎಸ್ಟಿ ಮೀಸಲಾತಿ 7.5 ಹೆಚ್ಚಳ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ 224 ದಿನಗಳಿಂದ ಹೋರಾಟ ಮಾಡುತ್ತಿರುವ ವಾಲ್ಮೀಕಿ ಪೀಠದ ಶ್ರೀಗಳ ಹೋರಾಟವನ್ನು ಬೆಂಬಲಿಸಿ, ಇಲ್ಲಿನ ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿತು.

ದಲಿತ ಮುಖಂಡ ಮುಂಡರಗಿ ನಾಗರಾಜ ಮಾತನಾಡಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ನಮಗೆ ಜನಸಂಖ್ಯೆ ಆಧಾರಿತ ಮೀಸಲಾತಿ ನೀಡಿ ಎಂದು ಕೇಳುವುದರಲ್ಲಿ ನ್ಯಾಯವಿದೆ. ಇದಕ್ಕಾಗಿ ನ್ಯಾ.ನಾಗಮೋಹನ್‌ದಾಸ್ ವರದಿಯನ್ನು ಸರ್ಕಾರ ಜಾರಿಗೆ ತರಬೇಕು. ಆ ಮೂಲಕ ಶ್ರೀಗಳ ಬೇಡಿಕೆ ಈಡೇರಬೇಕು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಬಲಿಷ್ಠ ಸಮಯದಾಯದಿಂದ ದೇಶದ ಹಲವೆಡೆ ನಮ್ಮ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲ ಒಗ್ಗಟ್ಟಾಗಿರಬೇಕು ಎಂದರು.

ಮೀಸಲು ಪ್ರಮಾಣ ಹೆಚ್ಚಿಸಬೇಕು ಎಂದು ರಾಜ್ಯದ ಉಚ್ಚ ನ್ಯಾಯಾಲಯ 2017ರಲ್ಲಿ ನಿರ್ದೇಶನ ನೀಡಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ರಾಜ್ಯ ಸರ್ಕಾರ ಈಗಾಲಾದರೂ ಕ್ರಮಕೈಗೊಂಡು ಮೀಸಲಾತಿಯನ್ನು ಹೆಚ್ಚಿಸಬೇಕು. ಪರಿಶಿಷ್ಟರಿಗೆ ಮೀಸಲು ಹೆಚ್ಚಿಸುವ ಕುರಿತಂತೆ ಸಚಿವ ಸಂಪುಟದ ಉಪಸಮಿತಿಯ ಅಧ್ಯಕ್ಷರಾಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಮತ್ತು ಸಂಪುಟ ಸಚಿವರು, ಕ್ರಮಕೈಗೊಂಡು ಎಸ್‌ಸಿ ಮತ್ತು ಎಸ್ಟಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹೆಸರಿನಲ್ಲಿ ನಕಲು ಜಾತಿ ಪ್ರಮಾಣಪತ್ರಗಳನ್ನು ಪಡೆಯುತ್ತಿರುವ ಹಾಗೂ ವಿತರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ರಾಜ್ಯದ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಸಮಿತಿಯ ಮುಖಂಡರಾದ ಎ.ಮಾನಯ್ಯ, ದೊಡ್ಡ ಎರ‌್ರಿಸ್ವಾಮಿ, ಕೆ.ಈರಪ್ಪ, ಜಿ.ರುದ್ರಪ್ಪ, ಎನ್.ಸತ್ಯನಾರಾಯಣ, ಹೊನ್ನೂರಪ್ಪ, ಶ್ರೀನಿವಾಸ್, ತಿಮ್ಮಪ್ಪ ಸೇರಿದಂತೆ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net