ಕಲುಷಿತ ನೀರು ಸೇವಿಸಿ 18 ಜನಕ್ಕೆ ವಾಂತಿ-ಭೇದಿ

BLY-2-5
ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿರುವ ಬಳ್ಳಾರಿ ತಾಲೂಕಿನ ಕುಂಟನಾಳ ಗ್ರಾಮದ ಮಹಿಳೆಯರಿಬ್ಬರನ್ನು ವಿಮ್ಸ್ ಗೆ ದಾಖಲಿಸಿರುವುದು.
Published on

ಬಳ್ಳಾರಿ: ತಾಲೂಕಿನ ಕುಂಟನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಇಬ್ಬರು ಮಕ್ಕಳು ಸೇರಿ 18 ಜನ ವಾಂತಿ-ಭೇದಿಯಿಂದಾಗಿ ಅಸ್ವಸ್ಥಗೊಂಡಿದ್ದಾರೆ.
ಮಾರ್ಚ್ 27ರಂದು ಮೂವರು, 28ರಂದು ಇಬ್ಬರು, 29ರಂದು ಇಬ್ಬರು, 30ರಂದು ಮೂವರು ಮತ್ತು 31ರಂದು ನಾಲ್ಕು ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ.

ಗ್ರಾಮದ ವಾಲ್ಮೀಕಿ ಭವನದಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 10 ಜನ ಚೇತರಿಸಿಕೊಂಡಿದ್ದಾರೆ ಎಂದು ರೂಪನಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಣಾಧಿಕಾರಿ ವೀರರೆಡ್ಡಿ ತಿಳಿಸಿದ್ದಾರೆ.

ಕುಂಟನಾಳ ಗ್ರಾಮದಲ್ಲಿ ಜಿಪಂ ವತಿಯಿಂದ ಜಲಜೀವನ್‌ಮಿಷನ್ ಯೋಜನೆಯಡಿ ಮನೆಗಳಿಗೆ ನೀರು ಪೂರೈಸುವ ಪೈಪ್‌ಲೈನ್ ಕಾಮಗಾರಿ ಕೆಲಸ ನಡೆಯುತ್ತಿದೆ. ಗ್ರಾಮದ ಕೆಲ ಭಾಗದಲ್ಲಿ ಪೈಪ್‌ಲೈನ್ ಒಡೆದು ಚರಂಡಿ ನೀರು ಪೈಪ್ ಸೇರುತ್ತಿದೆ ಎನ್ನಲಾಗಿದೆ. ಇದರಿಂದಲೇ 18 ಜನರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ಘಟನೆಗೆ ಗ್ರಾಪಂ ಸಿಬ್ಬಂದಿ ನಿರ್ಲಕ್ಷೃ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ವೈದ್ಯರ ತಂಡವೊಂದು ಕುಂಟನಾಳ ಗ್ರಾಮಕ್ಕೆ ಭೇಟಿ ನೀಡಿ, ವಾಂತಿ-ಭೇದಿ ಆದವರ ಆರೋಗ್ಯ ಪರಿಶೀಲಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ವೈದ್ಯರ ತಂಡ ಬಿಡಾರ ಹೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ದನ್, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ ಗ್ರಾಮದ ಹೊರ ವಲಯದಲ್ಲಿ ಹರಿಯುತ್ತಿರುವ ವೇದಾವತಿ ನದಿ ನೀರನ್ನು ಪರಿಶೀಲಿಸಿದ್ದು, ಗ್ರಾಮಕ್ಕೆ ಪೂರೈಕೆ ಮಾಡುತ್ತಿರುವ ನೀರಿನ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಕುಂಟನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿರುವ ಪ್ರಕರಣ ಗಮನಕ್ಕೆ ಬಂದಿದೆ. ಈಗಾಗಲೇ ನೀರು ಹಾಗೂ ಆಹಾರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಐದು ಕುಟುಂಬಗಳ 18 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಮನೆಯಲ್ಲಿ ಶುಚಿತ್ವ ಕಾಪಾಡಲು ಸಲಹೆ ನೀಡಲಾಗಿದೆ. ಕಲುಷಿತ ನೀರು ಸೇವಿಸಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಗುಣವಾಗಿರುವವರಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ತುರ್ತು ಸಂದರ್ಭಕ್ಕಾಗಿ ಒಂದು ಅಂಬ್ಯುಲೆನ್ಸ್ ಇರಿಸಲಾಗಿದೆ.ಡಾ.ಎಚ್.ಎಲ್.ಜನಾರ್ದನ್ ಬಳ್ಳಾರಿ ಡಿಎಚ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net